×
Ad

ತೆರೆದ ವಾಹನಗಳಲ್ಲಿ ಸರಕು ಸಾಗಾಟ: ಸೂಕ್ತ ಕ್ರಮಕ್ಕೆ ಆಗ್ರಹ

Update: 2019-03-08 21:33 IST

ಮಂಗಳೂರು, ಮಾ. 8: ಟ್ರಕ್, ಲಾರಿ ಮತ್ತಿತರ ಗೂಡ್ಸ್ ವಾಹನಗಳಲ್ಲಿ ಮರಳು, ಮಣ್ಣು, ಜಲ್ಲಿ ಮತ್ತಿತರ ಸಾಮಗ್ರಿಗಳನ್ನು ಸಾಗಿಸುವಾಗ ಮೇಲ್ಗಡೆ ಟರ್ಪಾಲ್ ಹಾಕಿ ಮುಚ್ಚುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗುವುದು ಎಂದು ಮಂಗಳೂರು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ದಾರೆ.

ಪೊಲೀಸ್ ಆಯುಕ್ತಾಲಯದಲ್ಲಿ ಶುಕ್ರವಾರ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲುಗಳಿಗೆ ಸ್ಪಂದಿಸಿ ಅವರು ಮಾತನಾಡಿದರು.

ಲಾರಿ ಮತ್ತಿತರ ಗೂಡ್ಸ್ ವಾಹನಗಳಲ್ಲಿ ಮರಳು ಮತ್ತು ಮಣ್ಣು ಸಾಗಿಸುವಾಗ ಮೇಲ್ಗಡೆ ಮುಚ್ಚಬೇಕು ಎಂಬ ನಿಯಮವಿದೆ. ಆದರೆ ಬಹುತೇಕ ವಾಹನ ಚಾಲಕರು ಮುಚ್ಚದೆ ತೆರೆದ ವಾಹನದಲ್ಲೇ ಸಾಮಗ್ರಿಗಳನ್ನು ಸಾಗಾಟ ಮಾಡುತ್ತಿದ್ದಾರೆ. ಇದರಿಂದ ವಾಹನಗಳ ಹಿಂದಿನಿಂದ ಸಾಗುವ ದ್ವಿಚಕ್ರ ವಾಹನ ಸವಾರರ ಕಣ್ಣಿಗೆ ಮಣ್ಣು, ಕಲ್ಲುಗಳು ಬೀಳುತ್ತಿದ್ದು, ಸಂಚರಿಸಲು ಸಾಧ್ಯವಾಗುತ್ತಿಲ್ಲ ಹಲವು ಮಂದಿ ಫೋನ್ ಕರೆ ಮಾಡಿ ಅಸಮಾಧಾನ ವ್ಯಕ್ತಪಡಿಸಿದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಆಯುಕ್ತರು ಅಂತಹ ವಾಹನಗಳನ್ನು ಮುಟ್ಟುಗೋಲು ಹಾಕಲು ಅಧೀನ ಅಧಿಕಾರಿಗಳಿಗೆ ಸೂಚಿಸಿದರು.

ಕಟ್ಟಡ ನಿರ್ಮಾಣ ಕಾಮಗಾರಿ ಸಂದರ್ಭ ಕಲ್ಲು, ಮಣ್ಣು, ಜಲ್ಲಿ, ಸಿಮೆಂಟ್, ಕಬ್ಬಿಣದ ಸರಳು ಇತ್ಯಾದಿಗಳನ್ನು ರಸ್ತೆ ಬದಿ ಡಂಪ್ ಮಾಡುವುದರಿಂದ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ ಎಂದು ವ್ಯಕ್ತಿಯೊಬ್ಬರು ಅಹವಾಲು ತೋಡಿಕೊಂಡರು. ಸಂಬಂಧಪಟ್ಟ ಕಟ್ಟಡದ ಮಾಲಕರಿಗೆ ನೋಟಿಸ್ ನೀಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದರು.

ರಸ್ತೆಯಲ್ಲೇ ಮೀನು ಮಾರಾಟ: ಉಳ್ಳಾಲ ಒಳಪೇಟೆಯಲ್ಲಿ ಮೀನು ಮಾರುಕಟ್ಟೆ ಇಲ್ಲದ ಕಾರಣ ರಸ್ತೆ ಬದಿ ಮೀನು ಮಾರಾಟ ಮಾಡಲಾಗುತ್ತಿದ್ದು, ಇದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ವ್ಯಕ್ತಿಯೊಬ್ಬರು ದೂರಿದರು. ಈ ಬಗ್ಗೆ ಸಂಬಂಧಪಟ್ಟವರ ಗಮನ ಸೆಳೆದು ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಆಯುಕ್ತರು ಭರವಸೆ ನೀಡಿದರು.

ಬೀದಿ ಬದಿ ವ್ಯಾಪಾರ: ಸೆಂಟ್ರಲ್ ಮಾರ್ಕೆಟ್ ಆಸುಪಾಸು ಪ್ರತೀ ರವಿವಾರ ಬೀದಿ ಬದಿ ವ್ಯಾಪಾರಿಗಳಿಂದಾಗಿ ವಾಹನಗಳ ನಿಲುಗಡೆಗೆ ಜಾಗದ ಕೊರತೆ ಉಂಟಾಗುತ್ತಿದೆ ಎಂದು ಳ್ನೀರ್‌ನ ವ್ಯಕ್ತಿಯೊಬ್ಬರು ದೂರಿದರು.

ಝೀಬ್ರಾ ಕ್ರಾಸಿಂಗ್, ಹಂಪ್ಸ್ ಅಳವಡಿಕೆ: ನಗರ ವ್ಯಾಪ್ತಿಯ ಎಲ್ಲ ಕಡೆಗಳಲ್ಲಿರುವ ರಸ್ತೆ ಹಂಪ್‌ಗಳಿಗೆ ಬಣ್ಣ ಹಾಕಬೇಕು. ುಟ್‌ಪಾತ್‌ನ್ನು ಸರಿಪಡಿಸಬೇಕು ಎಂದು ಕೊಣಾಜೆಯ ನಾಗರಿಕರು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಆಯುಕ್ತರು ಈಗಾಗಲೇ ನಗರದ ಪ್ರಮುಖ ಜಂಕ್ಷನ್‌ಗಳ ಬಳಿ ಝೀಬ್ರಾ ಕ್ರಾಸಿಂಗ್ ಹಾಕಲಾಗುತ್ತಿದೆ. ಮುಂದೆ ಹಂಪ್‌ಗಳಿಗೂ ಬಣ್ಣ ಬಳಿಯಲಾಗುವುದು ಎಂದರು.

ಕೇರಳಕ್ಕೆ ಅಕ್ರಮ ಮರಳು ಸಾಗಾಟ: ತಲಪಾಡಿ ಟೋಲ್‌ಗೇಟ್ ಮುಂದೆ ದೇವಿಪುರ ರಸ್ತೆಯಲ್ಲಿ ಕೇರಳಕ್ಕೆ ಅಕ್ರಮವಾಗಿ ಮರಳು ಸಾಗಾಟ ನಡೆಯುತ್ತಿದೆ. ಇಲ್ಲಿ ಪೊಲೀಸರನ್ನು ನಿಯೋಜಿಸಿ ಅಕ್ರಮ ಮರಳು ಸಾಗಾಟಕ್ಕೆ ಕಡಿವಾಣ ಹಾಕಬೇಕು ಎಂದು ತಲಪಾಡಿಯ ನಾಗರಿಕರು ಒತ್ತಾಯಿಸಿದರು.

ರೈಲ್ವೆ ಗೇಟ್: ಪಾಂಡೇಶ್ವರದಲ್ಲಿ ಗೂಡ್ಸ್ ರೈಲುಗಳು ಆಗಮಿಸುವ ವೇಳೆ ರೈಲ್ವೆ ಗೇಟು ಅಳವಡಿಸುತ್ತಾರೆ. ಈ ಸಂದರ್ಭ ದ್ವಿಚಕ್ರ ವಾಹನ ಸವಾರರು ಅಪಾಯ ಲೆಕ್ಕಿಸದೆ ಹಳಿ ದಾಟುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಹಿರಿಯ ನಾಗರಿಕರೊಬ್ಬರು ಆಗ್ರಹಿಸಿದರು.

ವಿಮಾ ಭದ್ರತೆ ಇಲ್ಲದ ಶಾಲಾ ವಾಹನ: ನಗರದ ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿಗಳನ್ನು ಸಾಗಿಸುವ ಕೆಲವು ಬಸ್‌ಗಳಿಗೆ ವಿಮೆ ಮತ್ತಿತರ ಯಾವುದೇ ದಾಖಲೆ ಪತ್ರಗಳಿಲ್ಲ. ಈ ವಾಹನಗಳಲ್ಲಿ ಮಿತಿಗಿಂತ ಜಾಸ್ತಿ ಪ್ರಮಾಣದಲ್ಲಿ ವಿದ್ಯಾರ್ಥಿಗಳನ್ನು ಸಾಗಿಸಲಾಗುತ್ತಿದೆ. ಇಂತಹ ವಾಹನಗಳಲ್ಲಿ ತಮ್ಮ ಮಕ್ಕಳನ್ನು ಕಳುಹಿಸಲು ಭಯವಾಗುತ್ತಿದೆ ಎಂದು ನಾಗರಿಕರು ದೂರಿದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಂದೀಪ್ ಪಾಟೀಲ್ ತಿಳಿಸಿದರು.

ಟ್ರಾಫಿಕ್ ಕೇಸ್ ಕಡಿಮೆ: ಮಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ನಿರಂತರವಾಗಿ ನಡೆಯುತ್ತಿದ್ದರೂ ಟ್ರಾಫಿಕ್ ಪೊಲೀಸರು ಸರಿಯಾಗಿ ಕೇಸು ದಾಖಲಿಸುತ್ತಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಸಂಚಾರಕ್ಕೆ ಸಂಬಂಧಿಸಿದ ಕೇಸುಗಳು ಕಡಿಮೆಯಾಗಿದೆ. ಇದನ್ನು ಸುಧಾರಿಸಲು ಕ್ರಮ ಕೈಗೊಳ್ಳ ಬೇಕೆಂದು ಮಣ್ಣಗುಡ್ಡೆಯ ನಾಗರಿಕರೊಬ್ಬರು ಮನವಿ ಮಾಡಿದರು.

108ನೇ ಫೋನ್ ಇನ್ ಕಾರ್ಯಕ್ರಮದಲ್ಲಿ 29 ಕರೆಗಳು ಬಂದವು. ಈ ಸಂದರ್ಭ ಡಿಸಿಪಿಗಳಾದ ಹನುಮಂತರಾಯ ಮತ್ತು ಉಮಾ ಪ್ರಶಾಂತ್, ಎಸಿಪಿಗಳಾದ ಮಂಜುನಾಥ್ ಶೆಟ್ಟಿ ಮತ್ತು ವಿನಯ್ ಎ. ಗಾಂವ್ಕರ್, ಇನ್‌ಸ್ಪೆಕ್ಟರ್‌ಗಳಾದ ಅಮಾನುಲ್ಲಾ, ಗುರುದತ್ ಕಾಮತ್, ಸಿ.ಎನ್. ದಿವಾಕರ್, ಹರೀಶ್ ಕೆ. ಪಟೇಲ್, ಎಎಸ್ಸೈ ಯೋಗೇಶ್ವರನ್, ಎಚ್‌ಸಿ ಪುರುಷೋತ್ತಮ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News