ಟಿಂಟ್ ಫಿಲಂ ವಿರುದ್ಧ ಕಾರ್ಯಾಚರಣೆ: 2500 ವಾಹಗಳ ವಿರುದ್ಧ ಪ್ರಕರಣ ದಾಖಲು
ಮಂಗಳೂರು, ಮಾ.8: ವಾಹನಗಳ ಟಿಂಟ್ ಫಿಲಂ ವಿರುದ್ಧ ಕಾರ್ಯಾಚರಣೆ ನಡೆಸಿದ ಮಂಗಳೂರು ನಗರ ಪೊಲೀಸರು ವರ್ಷದ ಆರಂಭದಿಂದ ಈವರೆಗೆ 2500 ಕೇಸು ದಾಖಲಿಸಿದ್ದಾರೆ.
ಶುಕ್ರವಾರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ಉಮಾಪ್ರಶಾಂತ್ ಈ ಮಾಹಿತಿ ನೀಡಿದರು.
ಮಂಗಳೂರು ಮಹಾನಗರದಲ್ಲಿ ವಾಹನಗಳಲ್ಲಿ ಟಿಂಟ್ ಅಳವಡಿಕೆ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸಿ 2500 ಪ್ರಕರಣ ದಾಖಲಿಸಿದ್ದಾರೆ. ಮಾರ್ಚ್‌ನಲ್ಲೇ 145 ಕೇಸು ದಾಖಲಿಸಲಾಗಿದೆ ಎಂದು ಉಮಾ ಪ್ರಶಾಂತ್ ಹೇಳಿದರು.
ಟೋಯಿಂಗ್ ಚುರುಕು: ನೋ ಪಾರ್ಕಿಂಗ್ ಜಾಗ ಸಹಿತ ಅಲ್ಲಲ್ಲಿ ವಾಹನ ನಿಲುಗಡೆ ಮಾಡಿದ ಪ್ರಕರಣಗಳಿಗೆ ಸಂಬಂಧಿಸಿ ಕಳೆದೊಂದು ವಾರದಲ್ಲಿ 106 ವಾಹನಗಳನ್ನು ಟೋಯಿಂಗ್ ಮೂಲಕ ಎತ್ತಂಗಡಿ ಮಾಡಲಾಗಿದೆ. ಇವುಗಳಲ್ಲಿ 31 ಕಾರುಗಳಾದರೆ, 75 ದ್ವಿಚಕ್ರ ವಾಹನಗಳಾಗಿವೆ ಎಂದರು.
ಟೋಯಿಂಗ್ ಎತ್ತಂಗಡಿ ಮಾಡಿದ ವಾಹನಗಳು ಎಲ್ಲಿವೆ ಎಂಬ ಬಗ್ಗೆ ವಾಹನ ಮಾಲಕರಿಗೆ ಮಾಹಿತಿ ಇರುವುದಿಲ್ಲ ಎಂಬ ದೂರು ಕೇಳಿ ಬಂದಿದೆ. ಎತ್ತಂಗಡಿ ಮಾಡಿದ ವಾಹನಗಳನ್ನು ಆಯಾ ಪೊಲೀಸ್ ಠಾಣೆಗೆ ಸಾಗಿಸಲಾಗುತ್ತದೆ. ಟೋಯಿಂಗ್ ಮಾಡಿದ ಕೂಡಲೇ ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಲಾಗುತ್ತದೆ. ಆದ್ದರಿಂದ ವಾಹನ ಮಾಲಕರು ಅಥವಾ ಚಾಲಕರು ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ (ನಂ. 100 ಅಥವಾ 0824 2220800) ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದರು.
16 ಟ್ರಾಫಿಕ್ ವಾರ್ಡನ್‌ಗಳಿಗೆ ಸಮವಸ್ತ್ರ : ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ 16 ಟ್ರಾಫಿಕ್ ವಾರ್ಡನ್‌ಗಳಿಗೆ ಶುಕ್ರವಾರ ಪೊಲೀಸ್ ಆಯುಕ್ತಾಲಯದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸಂದೀಪ್ ಪಾಟೀಲ್ ಸಮವಸ ವಿತರಿಸಿದರು.
ಈ ಸಂದರ್ಭ ವಾರ್ಡನ್ ತಂಡದ ಮುಖ್ಯಸ್ಥ ಜೆ.ಜಿ. ಗೋನ್ಸಾಲ್ವಿಸ್, ಡಿಸಿಪಿ ಉಮಾ ಪ್ರಶಾಂತ್, ಎಸಿಪಿ ಮಂಜುನಾಥ ಶೆಟ್ಟಿ, ಇನ್ಸ್‌ಪೆಕ್ಟರ್ ಅಮಾನುಲ್ಲಾ ಮತ್ತಿತರರು ಉಪಸ್ಥಿತರಿದ್ದರು.