×
Ad

ಸಿ.ಎಂ. ಇಬ್ರಾಹೀಂ ಹೇಳಿಕೆಗೆ ಖಂಡನೆ

Update: 2019-03-08 21:37 IST

ಮಂಗಳೂರು, ಮಾ.8: ಅಡ್ಯಾರ್‌ನಲ್ಲಿ ಬುಧವಾರ ನಡೆದ ಕಾಂಗ್ರೆಸ್ ಪರಿವರ್ತನಾ ಯಾತ್ರೆಯ ಸಭಾ ಕಾರ್ಯಕ್ರಮದಲ್ಲಿ ಮಾಜಿ ಕೇಂದ್ರ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹೀಂ ನೀಡಿರುವ ಹೇಳಿಕೆಗೆ ಮುಸ್ಲಿಂ ಸಂಘಟನೆಗಳಿಂದ ಖಂಡನೆ ವ್ಯಕ್ತವಾಗಿವೆ.

ಮುಸ್ಲಿಂ ಸಂಘಟನೆಗಳ ಒಕ್ಕೂಟ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಮಮಂದಿರ ಕಟ್ಟಿಸಿಕೊಡುವೆವು ಎಂದು ಕಾಂಗ್ರೆಸ್ ಮುಖಂಡ ಸಿ.ಎಂ. ಇಬ್ರಾಹೀಂ ಹೇಳಿಕೆ ನೀಡಿರುವುದು ಸರಿಯಲ್ಲ. ಪ್ರಕರಣವು ಇದೀಗ ನ್ಯಾಯಾಲಯದಲ್ಲಿದೆ. ಅಂತಿಮ ತೀರ್ಪು ಇನ್ನೂ ಹೊರ ಬಿದ್ದಿಲ್ಲ. ಹೀಗಿರುವಾಗ ಸಾಮಾನ್ಯ ಜನರಲ್ಲಿ ಗೊಂದಲ ಸೃಷ್ಟಿಸುವಂತಹ ಹೇಳಿಕೆಗಳನ್ನು ನೀಡಿ ಜನರ ಧಾರ್ಮಿಕ ಭಾವನೆಗಳನ್ನು ಪ್ರಚೋದಿಸಲು ಮುಂದಾಗಿರುವುದು ಖಂಡನೀಯ. ಮತೀಯ ಸಂಬಂಧಿತ ಹೇಳಿಕೆಗಳನ್ನು ನೀಡಿ ರಾಜಕಾರಣಕ್ಕೆ ದುರ್ಬಳಕೆ ಮಾಡುವ ಸಿ.ಎಂ. ಇಬ್ರಾಹೀಂ ತನ್ನ ಹೇಳಿಕೆಯನ್ನು ತಕ್ಷಣ ಹಿಂಪಡೆಯಬೇಕು ಎಂದು ದ.ಕ ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ, ಮಾಜಿ ಮೇಯರ್ ಕೆ. ಅಶ್ರಫ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಂಗಳೂರು ಸೆಂಟ್ರಲ್ ಕಮಿಟಿ: ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹೀಂ ಕೇವಲ ರಾಜಕೀಯ ಲಾಭಕ್ಕೋಸ್ಕರ ಇಂತಹ ಹೇಳಿಕೆಗಳನ್ನು ನೀಡಿದ್ದಾರೆ. ಪ್ರಕರಣವನ್ನು ಸೌಹಾರ್ದತಯುತವಾಗಿ ಬಗೆಹರಿಸುವುದು ಒಳ್ಳೆಯ ಬೆಳವಣಿಗೆ. ಆದರೆ ಇಬ್ರಾಹೀಂ ಕೇವಲ ರಾಮಮಂದಿರ ಕಟ್ಟಿಸಿಕೊಡುವ ಬಗ್ಗೆ ಪ್ರಸ್ತಾಪಿಸಿದ್ದಾರೆಯೇ ವಿನಃ ಬಾಬರಿ ಮಸೀದಿಯನ್ನು ಪುನಃ ನಿರ್ಮಿಸಿಕೊಡುವುದಾಗಿ ಹೇಳದಿರುವುದು ವಿಪರ್ಯಾಸ. ರಾಮಮಂದಿರ ಕಟ್ಟಿಸಿಕೊಡುವುದಾದರೆ ಅದು ಹಿಂದೂಗಳ ತುಷ್ಟೀಕರಣ ಆಗದೇ ಎಂದು ಮಂಗಳೂರು ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲಿ ಹಸನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News