ಸಹ್ಯಾದ್ರಿ ವಿಜ್ ರಸಪ್ರಶ್ನೆ ಸ್ಪರ್ಧೆ: ಮಂಗಳೂರಿನ ಮಹೇಶ್ ಕಾಲೇಜು ಚಾಂಪಿಯನ್
ಮಂಗಳೂರು, ಮಾ. 8: ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಹಾಗೂ ಮ್ಯಾನೇಜ್‌ಮೆಂಟ್‌ನ ವ್ಯವಹಾರಿಕ ಆಡಳಿತ ವಿಭಾಗ ಆಯೋಜಿಸಿದ್ದ ಸಹ್ಯಾದ್ರಿ ವಿಜ್ ಕ್ವಿಜ್ 2019ನಲ್ಲಿ ಮಂಗಳೂರಿನ ಮಹೇಶ್ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್ ವಿಜೇತ ತಂಡವಾಗಿ ಹೊರ ಹೊಮ್ಮಿದೆ.
ನಗರದ ಹೊರವಲಯದಲ್ಲಿನ ಸಹ್ಯಾದ್ರಿ ಕಾಲೇಜ್‌ನ ಕ್ಯಾಂಪಸ್‌ನಲ್ಲಿ ಶುಕ್ರವಾರ ಅಂತಿಮ ಹಂತದ ಸ್ಪರ್ಧೆಗಳು ನಡೆದು ವಿಜೇತರನ್ನು ಘೋಷಿಸಲಾಯಿತು.
ಮಣಿಪಾಲ್‌ನ ಡಿಪಾರ್ಟ್‌ಮೆಂಟ್ ಆಫ್ ಕಾಮರ್ಸ್ ಪ್ರಥಮ ರನ್ನರ್ಸ್‌ಅಪ್ ಹಾಗೂ ಎಸ್‌ಡಿಎಂ ಉಜಿರೆ ರನ್ನರ್ಸ್‌ಅಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಅಲ್ಲದೆ, ಅಂತಿಮ ಆರರ ಹಂತಕ್ಕೆ ಆಯ್ಕೆಯಾದ ಬೆಳಗಾವಿ ಗೋಗ್ಟೆ ಕಾಲೇಜ್ ಆಫ್ ಕಾಮರ್ಸ್, ಮಾಹೆ ವಾಣಿಜ್ಯ ವಿಭಾಗ, ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜ್ ಸಮಾಧಾನಕರ ಬಹುಮಾನಗಳನ್ನು ಪಡೆದುಕೊಂಡವು. ಮಹೇಶ್ ಕಾಲೇಜ್‌ನ ಅಮರ್ ಹಸನ್ ಸೈಯದ್ ಬೆಸ್ಟ್ ಕ್ವಿಝರ್ ಪ್ರಶಸ್ತಿ ಪಡೆದುಕೊಂಡರು.
ಬಹುಮಾನವು ಒಟ್ಟು 50 ಸಾವಿರ ರೂ. ನಗದು ಹಾಗೂ ಟ್ರೋಫಿಯನ್ನು ಒಳಗೊಂಡಿತ್ತು. ಮಂಗಳೂರು, ಉಡುಪಿ, ಕೊಡಗು, ಕಾರವಾರ ಶಿವಮೊಗ್ಗ ಸೇರಿದಂತೆ ಅನೇಕ ಕಡೆಗಳಿಂದ 9ಸಾವಿರ ವಿದ್ಯಾರ್ಥಿಗಳು ಕಾಲೇಜು ಹಂತದಲ್ಲಿ ಭಾಗವಹಿಸಿದ್ದು, 950 ವಿದ್ಯಾರ್ಥಿಗಳು ಅಂತಿಮ ಹಂತಕ್ಕೆ ಆಯ್ಕೆಯಾಗಿದ್ದರು.
ಮಣಿಪಾಲ್ ಅಕಾಡಮಿಯ ವಿದ್ಯಾ ಶೆಣೈ, ರಾಮಕೃಷ್ಣ ಕ್ರೆಡಟ್ ಕೋ ಅಪರೇಟಿವ್ ಸೊಸೈಟಿಯ ಜಯರಾಮ್ ಬಿ.ರೈ ಪ್ರಶಸ್ತಿ ಪ್ರದಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾಲೇಜ್ ಪ್ರಿನ್ಸಿಪಾಲ್ ಶ್ರೀನಿವಾಸ್ ರಾವ್ ಕುಂಟೆ, ಎಸ್.ಎಸ್.ಬಾಲಕೃಷ್ಣ, ವಾಣಿಜ್ಯ ವಿಭಾಗದ ವಿಶಾಲ್ ಸಮತ ಮತ್ತಿತರರು ಉಪಸ್ಥಿತರಿದ್ದರು.