ಉಗ್ರ ಶಿಬಿರಕ್ಕೆ ಭೇಟಿ ನೀಡಿದ ‘ರಾಯ್ಟರ್ಸ್’ ತಂಡವನ್ನು ತಡೆದ ಪೊಲಿಸರು

Update: 2019-03-08 16:46 GMT

ಇಸ್ಲಾಮಾಬಾದ್, ಮಾ. 8: ಕಳೆದ ವಾರ ಭಾರತೀಯ ವಾಯುಪಡೆ ವಿಮಾನಗಳು ದಾಳಿ ನಡೆಸಿದ ಮದರಸ ಎನ್ನಲಾದ ಕಟ್ಟಡ ಇರುವ ಸ್ಥಳಕ್ಕೆ ಹೋಗಲು ಬಾಲಕೋಟ್‌ನಲ್ಲಿ ಬೆಟ್ಟ ಹತ್ತುತ್ತಿದ್ದ ‘ರಾಯ್ಟರ್ಸ್’ ಸುದ್ದಿ ಸಂಸ್ಥೆಯ ತಂಡವೊಂದನ್ನು ಪಾಕಿಸ್ತಾನಿ ಪೊಲೀಸರು ಗುರುವಾರ ತಡೆದಿದ್ದಾರೆ.

ಕಳೆದ ಒಂಬತ್ತು ದಿನಗಳ ಅವಧಿಯಲ್ಲಿ ‘ರಾಯ್ಟರ್ಸ್’ ವರದಿಗಾರರು ಅಲ್ಲಿಗೆ ಭೇಟಿ ನೀಡುತ್ತಿರುವುದು ಇದು ಮೂರನೇ ಬಾರಿ. ಆದರೆ, ಪ್ರತಿ ಸಾರಿಯೂ ಅವರು ಅಲ್ಲಿಗೆ ಹೋಗದಂತೆ ತಡೆಯಲಾಗಿದೆ.

ಭಯೋತ್ಪಾದನೆ ತರಬೇತಿ ಶಿಬಿರದ ಮೇಲೆ ನಡೆಸಲಾದ ವೈಮಾನಿಕ ದಾಳಿಯಲ್ಲಿ ಭಾರೀ ಸಂಖ್ಯೆಯ ಜೈಶೆ ಮುಹಮ್ಮದ್ ಉಗ್ರರು, ತರಬೇತಿದಾರರು ಮತ್ತು ಹಿರಿಯ ಕಮಾಂಡರ್‌ಗಳು ಸತ್ತಿದ್ದಾರೆ ಎಂಬುದಾಗಿ ದಾಳಿ ನಡೆದ ದಿನ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಭಾರತದ ವಿದೇಶ ಕಾರ್ಯದರ್ಶಿ ವಿಜಯ ಗೋಖಲೆ ಹೇಳಿರುವುದನ್ನು ಸ್ಮರಿಸಬಹುದಾಗಿದೆ.

ಭದ್ರತಾ ಕಾರಣಗಳಿಗಾಗಿ ಅನುಮತಿ ನಿರಾಕರಿಸಲಾಗುತ್ತಿದೆ ಎಂದು ಪಾಕಿಸ್ತಾನಿ ಭದ್ರತಾ ಅಧಿಕಾರಿಗಳು ಹೇಳಿದ್ದಾರೆ.

►‘ಕಟ್ಟಡದ ಸುತ್ತಲಿನ ಮರಗಳಿಗೆ ಹಾನಿಯಾಗಿಲ್ಲ’

ಮದರಸವನ್ನು 100 ಮೀಟರ್ ದೂರದಿಂದ ಹಾಗೂ ಕೆಳಗಿನಿಂದ ಮಾತ್ರ ನೋಡಲು ‘ರಾಯ್ಟರ್ಸ್’ ತಂಡಕ್ಕೆ ಸಾಧ್ಯವಾಗಿದೆ ಎಂದು ‘ರಾಯ್ಟರ್ಸ್’ ವರದಿ ಮಾಡಿದೆ.

ವರದಿಗಾರರು ನೋಡಲು ಸಾಧ್ಯವಾದ ಕಟ್ಟಡವು ಪೈನ್ ಮರಗಳಿಂದ ಸುತ್ತುವರಿಯಲ್ಪಟ್ಟಿತ್ತು ಹಾಗೂ ಈ ಮರಗಳಿಗೆ ಹಾನಿಯಾಗಿರುವುದು ಗಮನಕ್ಕೆ ಬಂದಿಲ್ಲ ಎಂದು ಅದು ಹೇಳಿದೆ.

‘‘ಅಲ್ಲಿ ಯಾವುದೇ ರೀತಿಯ ಹಾನಿ ಅಥವಾ ಚಟುವಟಿಕೆಯ ಲಕ್ಷಣಗಳಿಲ್ಲ. ಆದರೆ, 100 ಮೀಟರ್ ಅಂತರದಿಂದ ನೋಡಿರುವುದರಿಂದ ಈ ಅಂದಾಜು ಸೀಮಿತವಾಗಿದೆ, ಅಂತಿಮವಲ್ಲ’’ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News