×
Ad

ಹಲ್ಲೆಗೊಳಗಾದ ಕಾಶ್ಮೀರಿ ವ್ಯಾಪಾರಿಗಳ ಮುಂದೆ ಗ್ರಾಹಕರ ದಂಡು

Update: 2019-03-08 22:29 IST

ಲಕ್ನೋ,ಮಾ.8: ಜಮ್ಮು ಮತ್ತು ಕಾಶ್ಮೀರಕ್ಕೆ ಸೇರಿದವರು ಎಂಬ ಕಾರಣಕ್ಕಾಗಿ ಬುಧವಾರ ಲಕ್ನೋ ಮಾರುಕಟ್ಟೆಯಲ್ಲಿ ಸಂಘಪರಿವಾರದ ಕಾರ್ಯಕರ್ತರಿಂದ ಹಲ್ಲೆಗೊಳಗಾದ ಕಾಶ್ಮೀರಿ ಒಣಹಣ್ಣು ವ್ಯಾಪಾರಿಗಳು ಪುನಃ ಲಕ್ನೋದಲ್ಲಿ ತಮ್ಮ ವ್ಯಾಪಾರವನ್ನು ಆರಂಭಿಸಿದ್ದಾರೆ.

ಈ ವ್ಯಾಪಾರಿಗಳು ಹಿಂದೆ ದಲಿಗಂಜ್‌ನಲ್ಲಿ ವ್ಯಾಪಾರ ನಡೆಸುತ್ತಿದ್ದರೂ ಘಟನೆಯ ನಂತರ ಅಖಿಲ ಭಾರತ ಪ್ರಜಾಸತಾತ್ಮಕ ಮಹಿಳೆಯರ ಸಂಘ ನಿರ್ಮಿಸಿದ ತಾತ್ಕಾಲಿಕ ಮಾರುಕಟ್ಟೆಯಲ್ಲಿ ವ್ಯಾಪಾರ ಆರಂಭಿಸಿದ್ದಾರೆ. ಆದರೆ ಇಲ್ಲಿಯೂ ಈ ಇಬ್ಬರು ಕಾಶ್ಮೀರಿ ವ್ಯಾಪಾರಿಗಳಿಗೆ ಗ್ರಾಹಕರ ಕೊರತೆ ಕಾಡಲಿಲ್ಲ ಎಂದು ಸಂಘದ ಸದಸ್ಯರು ತಿಳಿಸಿದ್ದಾರೆ.

“ನಾನು ಕಳೆದ 22 ವರ್ಷಗಳಿಂದ ಲಕ್ನೋಗೆ ಬರುತ್ತಿದ್ದೇನೆ. ಇಲ್ಲಿನ ಜನರು ನಮ್ಮನ್ನು ಬಹಳ ಪ್ರೀತಿಸುತ್ತಾರೆ. ನಮ್ಮ ಊರಿಗಿಂತಲೂ ನಾವು ಇಲ್ಲಿ ಸುರಕ್ಷಿತ ಎಂದು ಭಾವಿಸುತ್ತೇನೆ” ಎಂದು ಹಲ್ಲೆಗೊಳಗಾದ ಅಬ್ದುಲ್ ಸಲಾಮ್ ಅವರ ಗೆಳೆಯ ಮುಷ್ತಾಕ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

“ಇಂಥ ಅಹಿತಕರ ಘಟನೆ ಯಾಕೆ ನಡೆಯಿತು ಎನ್ನುವುದು ನಮಗೆ ತಿಳಿದಿದೆ. ಪುಲ್ವಾಮ ಉಗ್ರರ ದಾಳಿಯಿಂದಾಗಿ ಈ ಹಲ್ಲೆ ನಡೆದಿದೆ. ಒಂದು ಕೊಳಕು ಮೀನು ಇಡೀ ಕೆರೆಯನ್ನೇ ಮಲಿನ ಮಾಡುತ್ತದೆ. ನಾವು ಮೊದಲು ಬರೇಲಿಯಲ್ಲಿದ್ದೆವು ಅಲ್ಲಿಂದ ನಮ್ಮನ್ನು ಓಡಿಸಿದರು. ಆದರೆ ಲಕ್ನೋದಲ್ಲಿ ಜನರು ಇಂದಿನವರೆಗೂ ನಮಗೆ ಬೆಂಬಲವಾಗಿ ನಿಂತಿದ್ದಾರೆ” ಎಂದು ಕಳೆದ ಎರಡು ದಶಕಗಳಿಂದ ಲಕ್ನೋದಲ್ಲಿ ವ್ಯಾಪಾರ ಮಾಡುವ ಕಾಶ್ಮೀರಿ ಖುರ್ಷಿದ್ ಅಹಮದ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News