ಉದ್ಯಮ ಘಟಕಗಳಿಂದ ಪ್ರತಿ ಆಧಾರ್ ಪರಿಶೀಲನೆಗೆ 20 ರೂ.
ಹೊಸದಿಲ್ಲಿ,ಮಾ.8: ಆಧಾರ್ ಸೇವೆಯನ್ನು ಉಪಯೋಗಿಸುವ ಉದ್ಯಮ ಸಂಸ್ಥೆಗಳು ಪ್ರತಿ ಗ್ರಾಹಕ ಪರಿಶೀಲನೆಗೆ 20ರೂ. ಹಾಗೂ ಪ್ರತಿ ವ್ಯವಹಾರ ದೃಢೀಕರಣಕ್ಕೆ 50 ಪೈಸೆ ಶುಲ್ಕ ಪಾವತಿಸಬೇಕು ಎಂದು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಘೋಷಿಸಿದೆ.
ಸರಕಾರಿ ಸಂಸ್ಥೆಗಳು ಮತ್ತು ಅಂಚೆ ಈ ಶುಲ್ಕ ಪಾವತಿಯಿಂದ ವಿನಾಯಿತಿ ಹೊಂದಿವೆ ಎಂದು ಯುಐಡಿಎಐ ಮಾರ್ಚ್ 6ರಂದು ಹೊರಡಿಸಿದ್ದ ಗೆಝೆಟ್ ಅಧಿಸೂಚನೆಯಲ್ಲಿ ತಿಳಿಸಿದೆ. ಆಧಾರ್ ನೋಂದಣಿ ಮತ್ತು ಉನ್ನತೀಕರಣ ಸೇವೆಯನ್ನು ನೀಡುತ್ತಿರುವ ನಿಗದಿತ ವಾಣಿಜ್ಯ ಬ್ಯಾಂಕ್‌ಗಳೂ ಈ ಶುಲ್ಕ ಪಾವತಿಯಿಂದ ವಿನಾಯಿತಿ ಹೊಂದಿದೆ. ಆದರೆ ಆಧಾರ್ ನೋಂದಣಿ ಮತ್ತು ಉನ್ನತೀಕರಣಕ್ಕೆ ನೀಡಿದ್ದ ಗುರಿಯನ್ನು ತಲುಪದ ಬ್ಯಾಂಕ್‌ಗಳು ಈ ಶುಲ್ಕ ಪಾವತಿಸಬೇಕಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಶುಲ್ಕ ಪಾವತಿಯ ಬಿಲ್ ದೊರೆತ ಹದಿನೈದು ದಿನಗಳ ಒಳಗಾಗಿ ಸಂಸ್ಥೆಗಳು ಹಣವನ್ನು ಪಾವತಿಸಬೇಕು. ಇಲ್ಲವಾದಲ್ಲಿ ತಿಂಗಳಿಗೆ ಶೇ. 1.5 ಬಡ್ಡಿ ಹಾಗೂ ದೃಢೀಕರಣ ಮತ್ತು ಇ-ಕೆವೈಸಿ ಪ್ರಕ್ರಿಯೆಯನ್ನು ಸ್ಥಗಿತಗೊಳಸಲಾಗುವುದು ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಈ ಶುಲ್ಕ ಪಾವತಿಸಲು ಬಯಸದ ಸಂಸ್ಥೆಗಳು ಆಧಾರ್ ದೃಢೀಕರಣ ಸೇವೆಗಳನ್ನು ಸ್ಥಗಿತಗೊಳಿಸಬೇಕಾಗುತ್ತದೆ. ಆದರೆ ಈ ಸೇವೆ ಸಂಪೂರ್ಣವಾಗಿ ಸ್ಥಗಿತಗೊಳ್ಳುವ ದಿನಾಂಕದ ವರೆಗಿನ ಶುಲ್ಕ ಪಾವತಿಸಬೇಕಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.