×
Ad

ಏಕರೂಪದ ಚಿಕಿತ್ಸಾ ವಿಧಾನ ಇಂದಿನ ಅಗತ್ಯ: ಡಾ.ಶ್ರೀಧರ್ ಬಿ.ಎಸ್.

Update: 2019-03-09 20:39 IST

ಉಡುಪಿ, ಮಾ. 9: ಒಂದು ರೋಗಕ್ಕೆ ವಿವಿಧ ವೈದ್ಯರು ವಿವಿಧ ರೀತಿಯ ವೈದ್ಯ ಚೀಟಿಗಳನ್ನು ನೀಡುವುದರಿಂದ ರೋಗಿಗಳಲ್ಲಿ ಗೊಂದಲ ಉಂಟಾಗು ತ್ತಿದ್ದು, ಇದನ್ನು ನಿವಾರಿಸಲು ಏಕರೂಪ ಚಿಕಿತ್ಸಾ ವಿಧಾನ ಜಾರಿಗೆ ತರಬೇಕಾ ಗಿದೆ ಎಂದು ಕರ್ನಾಟಕ ಸರಕಾರದ ಆಯುಷ್ ಇಲಾಖೆಯ ಜಂಟಿ ನಿರ್ದೇಶಕ (ಮೆಡಿಕಲ್ ಕಾಲೇಜು) ಡಾ.ಶ್ರೀಧರ ಬಿ.ಎಸ್. ಹೇಳಿದ್ದಾರೆ.

ಮುಂಬೈಯ ಸಾಂಡೂ ಫಾರ್ಮಸುಟಿಕಲ್ ಕಂಪೆನಿ ವತಿಯಿಂದ ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಆವರಣದಲ್ಲಿ ಸ್ಥಾಪಿಸಲಾದ ಧನ್ವಂತರಿ ಪ್ರತಿಮೆಯನ್ನು ಶನಿವಾರ ಅನಾವರಣಗೊಳಿಸಿ ಅವರು ಮಾತನಾಡುತಿದ್ದರು.

ಏಕರೂಪದ ಚಿಕಿತ್ಸಾ ವಿಧಾನವನ್ನು ಕನಿಷ್ಟ 50 ರೋಗಗಳಲ್ಲಿ ಅನುಸರಿಸ ಬೇಕು. ಅದೇ ರೀತಿ ವೈದ್ಯರು ನೀಡುವ ಸಲಹೆಗಳಲ್ಲಿ ಶೇ.80ರಷ್ಟು ಸಾಮ್ಯತೆ ಇರಬೇಕಾಗುತ್ತದೆ. ಭಾರತೀಯ ಪರಂಪರೆಯ ಆಯುರ್ವೇದ ವೈದ್ಯ ಪದ್ಧತಿಯ ರಕ್ಷಣೆಗಾಗಿಯೂ ಕೆಲವು ಉಪಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.

ಆಯುರ್ವೇದ ಪದವಿ ಪೂರೈಸಿದ ಬಹುತೇಕ ವೈದ್ಯರು ಆಯುರ್ವೇದದ ಬದಲು ಅಲೋಪತಿ ವೈದ್ಯ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಈ ಕ್ರಮ ಸರಿ ಯಲ್ಲ. ಆಯುರ್ವೇದ ಕಲಿಕೆಯನ್ನು ಆಯ್ಕೆ ಮಾಡಿಕೊಂಡ ಬಳಿಕ ಆ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ಮತ್ತು ಅಭಿಮಾನ ಅತಿಅಗತ್ಯ. ಈ ನಿಟ್ಟಿನಲ್ಲಿ ವೈದ್ಯಕೀಯ ಶಿಕ್ಷಕರು ಸಂಶೋಧನೆ, ಹೊಸ ಹೊಸ ಚಿಕಿತ್ಸಾ ವಿಧಾನ, ಫಲಪ್ರದ ಚಿಕಿತ್ಸೆಗಳ ದಾಖಲೀಕರಣಗಳಿಗೆ ಆದ್ಯತೆ ನೀಡಬೇಕು ಎಂದರು.

ಸಾಂಡೂ ಫಾರ್ಮಸುಟಿಕಲ್‌ನ ನಿರ್ದೇಶಕ ಶಶಾಂಕ ಬಿ.ಸಾಂಡೂ ಮಾತ ನಾಡಿದರು. ಕಾಲೇಜು ಪ್ರಾಂಶುಪಾಲ ಡಾ.ಶ್ರೀನಿವಾಸ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಕೆ.ಆರ್.ರಾಮಚಂದ್ರ, ಪ್ರೊ. ಮುರಳೀಧರ ಶರ್ಮ, ಪ್ರೊ.ಪ್ರಭಾಕರ ರೆಂಜಾಳ್ ಹಾಗೂ ಸ್ವಾಸ್ಥ್ಯವೃತ್ತ ವಿಭಾಗ ಮುಖ್ಯಸ್ಥ ಪ್ರೊ.ಬಿ.ಆರ್.ದೊಡ್ಡಮನಿ ಅವರನ್ನು ಗೌರವಿಸಲಾಯಿತು.

ಕಾಲೇಜಿನ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಡೀನ್ ಡಾ.ನಿರಂಜನ ರಾವ್ ಸ್ವಾಗತಿಸಿದರು. ಆಸ್ಪತ್ರೆ ವೈದ್ಯಕೀಯ ಅಧೀಕ್ಷಕಿ ಡಾ.ಮಮತ ವಂದಿಸಿದರು. ರೋಗನಿಧಾನ ವಿಭಾಗದ ಡಾ.ಅರುಣ್ ಕುಮಾರ್ ಮತ್ತು ದ್ರವ್ಯಗುಣ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ನಿವೇದಿತ ಶೆಟ್ಟಿ ಕಾರ್ಯಕ್ರಮ ನಿರೂ ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News