ಕರ್ತಾರ್ಪುರ ಚರ್ಚೆಗೂ ಪಾಕ್ ಜೊತೆ ಮಾತುಕತೆಗೂ ಸಂಬಂಧವಿಲ್ಲ: ಕೇಂದ್ರ

Update: 2019-03-09 15:50 GMT

ಹೊಸದಿಲ್ಲಿ,ಮಾ.9: ಕರ್ತಾರ್ಪುರ ಕಾರಿಡಾರ್ ಮಾತುಕತೆ ಭಾರತೀಯ ಸಿಖ್ ಪ್ರಜೆಗಳ ಧಾರ್ಮಿಕ ಭಾವನೆಗೆ ಸಂಬಂಧಿಸಿದ್ದಾಗಿದ್ದು, ಪಾಕಿಸ್ತಾನದ ಜೊತೆ ದ್ವಿಪಕ್ಷೀಯ ಮಾತುಕತೆಯ ಆರಂಭ ಎಂದು ಯಾವುದೇ ಕಾರಣದಿಂದಲೂ ಯೋಚಿಸಬಾರದು ಎಂದು ಕೇಂದ್ರ ಸರಕಾರ ಶನಿವಾರ ಸ್ಪಷ್ಟಪಡಿಸಿದೆ.

ಕರ್ತಾರ್ಪುರ ಕಾರಿಡಾರ್‌ನ ಸಾಧ್ಯತೆಗಳನ್ನು ಅಂತಿಮಗೊಳಿಸುವ ಕುರಿತು ಪಾಕಿಸ್ತಾನದೊಂದಿಗೆ ನಡೆಯುವ ಮೊದಲ ಸಭೆಯು ಅಟಾರಿ-ವಾಘಾ ಗಡಿಯ ಭಾರತದ ಭಾಗದಲ್ಲಿ ಮಾರ್ಚ್ 14ರಂದು ನಡೆಯಲಿದೆ ಎಂದು ಭಾರತ ಈ ವಾರದ ಆರಂಭದಲ್ಲಿ ತಿಳಿಸಿತ್ತು. ಸದ್ಯ ದ್ವಿಪಕ್ಷೀಯ ಸಂಬಂಧದಲ್ಲಿ ಬಿರುಕು ಮೂಡಿರುವ ಸಂದರ್ಭದಲ್ಲಿ ಮಾತುಕತೆ ನಡೆಸುವುದು ಸೂಕ್ತವೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ್ ಕುಮಾರ್, ಕರ್ತಾರ್ಪುರ ಮಾತುಕತೆಯ ಉದ್ದೇಶ ಮತ್ತು ಅಗತ್ಯತೆಯನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು ಮತ್ತು ಯಾವುದೇ ಕಾರಣಕ್ಕೂ ಇದು ದ್ವಿಪಕ್ಷೀಯ ಮಾತುಕತೆಯ ಆರಂಭ ಎಂದು ತಿಳಿಯಬಾರದು ಎಂದು ತಿಳಿಸಿದ್ದಾರೆ.

ಈ ಸಭೆಗೆ ಪಾಕಿಸ್ತಾನಾದಿಂದ ಕೆಲವು ಸಂಶಯಗಳು ವ್ಯಕ್ತಿವಾಗಿದ್ದವೇ ಹೊರತು ಭಾರತ ಎಂದೂ ಸಭೆ ನಡೆಯುವುದಿಲ್ಲ ಎಂದು ತಿಳಿಸಿಲ್ಲ. ಮಾರ್ಚ್ 14ರಂದು ಪಾಕಿಸ್ತಾನ ಸಭೆಗೆ ಹಾಜರಾಗಲಿದೆ ಎಂಬ ಬಗ್ಗೆ ನಮಗೆ ಖುಷಿಯಿದೆ ಎಂದು ರವೀಶ್ ಕುಮಾರ್ ತಿಳಿಸಿದ್ದಾರೆ. ಇದು ಭಾರತದ ಸಿಖ್ ಪ್ರಜೆಗಳ ನಂಬಿಕೆಗೆ ಸಂಬಂಧಪಟ್ಟಿದೆ. ಸಭೆ ನಡೆಸುವ ನಮ್ಮ ನಿರ್ಧಾರವು ಗುರು ನಾನಕ್ ದೇವ್‌ಜಿ ಅವರ 55ನೇ ಜನ್ಮದಿನಾಚರಣೆಯಂದು ಕರ್ತಾರ್ಪುರ ಕಾರಿಡರನ್ನು ಕಾರ್ಯಗತಗೊಳಿಸುವ ಮತ್ತು ಪವಿತ್ರ ಗುರುದ್ವಾರ ಕರ್ತಾರ್ಪುರ ಸಾಹಿಬ್‌ಗೆ ಸುಲಭ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ರವೀಶ್ ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News