×
Ad

ಸಂಧಾನ ಸಂಘರ್ಷವಿಲ್ಲದೇ ಯಶಸ್ವಿಯಾಗಲಿ: ಪೇಜಾವರಶ್ರೀ

Update: 2019-03-09 21:50 IST

ಉಡುಪಿ, ಮಾ. 9: ಅಯೋಧ್ಯೆಯ ಶ್ರೀರಾಮಜನ್ಮಭೂಮಿ-ಬಾಬರಿ ಮಸೀದಿ ಭೂವಿವಾದವನ್ನು ಸಂಧಾನದ ಮೂಲಕ ಬಗೆಹರಿಸುವಂತೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಂತೆ ಸಂಧಾನವು ಸಂಘರ್ಷವಿಲ್ಲದೇ ಯಶಸ್ವಿ ಯಾಗಲಿ ಎಂದು ಪೇಜಾವರ ಮಠದ ಶ್ರೀವಿಶ್ವೇಶತೀರ್ಥರು ಹಾರೈಸಿದ್ದಾರೆ.

ರಥಬೀದಿಯಲ್ಲಿರುವ ಪೇಜಾವರ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ನನಗೆ ಎರಡು ಅಭಿಪ್ರಾಯಗಳಿವೆ ಎಂದರು. ದೇವರು ಇದ್ದಾನೋ, ಇಲ್ಲವೋ ಎಂಬ ವಿಚಾರದಲ್ಲಿ ಸಂಧಾನ ಬೇಕೇ?. ರಾಮಮಂದಿರ ಅಯೋಧ್ಯೆಯಲ್ಲಿ ಇದ್ದದ್ದು ದೇವರಿದ್ದಷ್ಟೇ ನಿಶ್ಚಿತವಾಗಿರುವುದರಿಂದ ಮತ್ತೆ ಸಂಧಾನ ಏತಕ್ಕೆ ? ಎಂದವರು ಪ್ರಶ್ನಿಸಿದರು.

ಸಂಧಾನದಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ಅಂತಿಮವಾಗಿ ಕೋರ್ಟ್ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ ಎಂದರು.

ಸಂಧಾನ ಎರಡು ಸಮುದಾಯಕ್ಕೂ ಸಮ್ಮತವಾಗಿರಲಿ ಎಂದು ಹಾರೈಸಿದ ಪೇಜಾವರಶ್ರೀ, ಆದರೆ ಇಬ್ಬರಿಗೂ ಸಮ್ಮತವಾಗುವ ರೀತಿಯಲ್ಲಿ ಸಂಧಾನ ಆಗುವ ಬಗ್ಗೆ ಸಂಶಯವಿದೆ ಎಂದರು. ಮುಂಬರುವ ಲೋಕಸಭಾ ಚುನಾವಣೆಗೂ ರಾಮಮಂದಿರಕ್ಕೂ ಯಾವುದೇ ಸಂಬಂಧವಿಲ್ಲ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸುಪ್ರೀಂ ಕೋರ್ಟ್ ನೇಮಿಸಿರುವ ಸಂಧಾನ ಸಮಿತಿಯ ಸದಸ್ಯರಾಗಿರುವ ಶ್ರೀರವಿಶಂಕರ್ ಗುರೂಜಿ ಅವರ ಪ್ರಯತ್ನಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ. ಸುಪ್ರೀಂ ಕೋರ್ಟ್ ಅಧಿಕೃತವಾಗಿ ಸಂಧಾನಕಾರರನ್ನು ನೇಮಿಸಿರುವುದರಿಂದ ರವಿಶಂಕರ್ ಗುರೂಜಿ ಅವರಿಗೆ ಈಗ ಹೆಚ್ಚಿನ ಬೆಲೆ ಬಂದಿದೆ ಎಂದಿರುವ ಪೇಜಾವರಶ್ರೀ, ರಾಮಮಂದಿರ ನಿರ್ಮಾಣ ವಿಳಂಬವಾಗಬಾರದು, ಸಂಧಾನ ಆಗದಿದ್ದರೆ ನ್ಯಾಯದ ರೀತಿಯಲ್ಲಿ ಮಂದಿರ ನಿರ್ಮಾಣವಾಗಲಿ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News