ಬ್ರಹ್ಮಾವರ: ಮಾ.10ರಂದು ಮಹಿಳೆಯರಿಗೆ ಸ್ವರಕ್ಷಣೆ ಕಾರ್ಯಾಗಾರ

Update: 2019-03-09 16:29 GMT

ಬ್ರಹ್ಮಾವರ, ಮಾ. 9: ಭಾರತೀಯ ದಂತ ವೈದ್ಯಕೀಯ ಸಂಘದ ಉಡುಪಿ ಜಿಲ್ಲಾ ಶಾಖೆಯ ಮಹಿಳಾ ಘಟಕದಿಂದ ಮಾ.10ರ ರವಿವಾರ ಮಹಿಳೆ ಯರಿಗೆ ಸ್ವರಕ್ಷಣೆ ಕಾರ್ಯಾಗಾರ ಬ್ರಹ್ಮಾವರದ ಬಂಟರ ಭವನದಲ್ಲಿ ನಡೆಯಲಿದೆ ಎಂದು ಘಟಕದ ಡಾ. ಸರಿತಾ ಉಪಾಧ್ಯಾಯ ಸಾಲಿಗ್ರಾಮ ತಿಳಿಸಿದ್ದಾರೆ.

ಬ್ರಹ್ಮಾವರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಪನ್ಮೂಲ ವ್ಯಕ್ತಿಗಳಾಗಿರುವ ಶೋಭಾಲತಾ ಮತ್ತು ಕಾರ್ತಿಕ್ ಕಟೀಲ್‌ರಿಂದ ಸ್ವ ಆತ್ಮರಕ್ಷಣೆ ಹಾಗೂ ಜಾಗೃತಿ ತಿಳುವಳಿಕೆಯ 95ನಿಮಿಷಗಳ ಕಾರ್ಯಾಗಾರ ನಡೆಯಲಿದೆ ಎಂದು ತಿಳಿಸಿದರು.

ಖಾಸಗಿ ದಂತ ವೈದ್ಯಕೀಯ ಸಂಘ ಈ ವರ್ಷದ ಪ್ರಾರಂಭದಿಂದ 26 ಸಾಮಾಜಿಕ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಗ್ರಾಮೀಣ ಪ್ರದೇಶ ದಲ್ಲಿ ನಡೆಸುತ್ತಾ ಬಂದಿದೆ. ಜಿಲ್ಲೆಯ 5 ತಾಲೂಕುಗಳಲ್ಲಿ ಒಂದೊಂದು ಗ್ರಾಮೀಣ ಪ್ರದೇಶವನ್ನು ಆಯ್ದುಕೊಂಡು ‘ಸ್ವಚ್ಛ್ ಮುಖ್ ಅಭಿಯಾನ್’ ಹಾಗೂ ಮಹಿಳೆಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್‌ಗಳನ್ನು ನೀಡಿ ಸ್ವಚ್ಛತಾ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಮೊದಲ ಹಂತದಲ್ಲಿ ನಾಳೆ 5ಸಾವಿರ ಸ್ಯಾನಿಟರಿ ಪ್ಯಾಡ್‌ಗಳನ್ನು ಹಂಚಲಾಗುವುದು. ಈ ಕಾರ್ಯಕ್ರಮಗಳಿಗೆ ಜಿಪಂ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ ಚಾಲನೆ ನೀಡುವರು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಡಾ. ದೀಪಾ ಡಿಲೀಮಾ ಬ್ರಹ್ಮಾವರ, ಪೇತ್ರಿಯ ಡಾ. ಜಾಸ್ಮಿನ್, ಉಡುಪಿಯ ಡಾ. ಫೌಝಿಯಾ ಮತ್ತು ಡಾ. ಸಹನಾ ಕಾಮತ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News