ವಿಶೇಷ ಮಕ್ಕಳ ಶಾಲೆ ‘ಸುಮೇಧ’ದ ವಾರ್ಷಿಕೋತ್ಸವ

Update: 2019-03-09 16:31 GMT

ಬ್ರಹ್ಮಾವರ, ಮಾ. 9: ನೀಲಾವರ ಗೋಶಾಲೆ ಸಮೀಪ ಪೇಜಾವರ ಮಠದ ವಿಶ್ವಜನೀನ ಟ್ರಸ್ಟ್ ಉಡುಪಿ ಇವರಿಂದ ನಡೆಸಲ್ಪಡುವ ವಿಶೇಷ ಮಕ್ಕಳ ‘ಸುಮೇಧ  ಪ್ರಜ್ಞಾ ವಿಕಾಸ ಕೇಂದ್ರ’ದ ವಾರ್ಷಿಕೋತ್ಸವನ್ನು ಪೇಜಾವರ ಮಠದ ಶ್ರೀವಿಶ್ವೇಶತೀರ್ಥರು ಉದ್ಘಾಟಿಸಿದರು.

‘ಬಾಯಿ ಬಾರದ ಮೂಕಪ್ರಾಣಿಗಳಾದ ಹಸುಗಳ ಸೇವೆ ಮತ್ತು ಬುದ್ಧಿ ಮಾಂದ್ಯ ಮಕ್ಕಳ ಸೇವೆ ಮಾಡುವುದು ದೇವರು ಮೆಚ್ಚುವ ಕೆಲಸವಾಗಿದೆ. ತಾಯಿ ತನ್ನ ಮಕ್ಕಳಲ್ಲಿ ಶಕ್ತಿ ಕಡಿಮೆ ಇರುವ ಮಗುವಿನ ಮೇಲೆ ಹೆಚ್ಚಿನ ಒಲವು ತೋರಿಸುವಂತೆ, ಸಮಾಜವೂ ಇಂತಹ ವಿಶೇಷ ಮಕ್ಕಳಲ್ಲಿ ಯಾವುದೇ ತಾರತಮ್ಯ ಮಾಡದೇ ಅವರಿಗೆ ಪೂರಕವಾದ ಕೆಲಸ ಮಾಡುವಂತೆ ಕರೆ ನೀಡಿದರು.

ವಿಶ್ವ ಜನೀನ ಟ್ರಸ್ಟ್‌ನ ಅಧ್ಯಕ್ಷರಾದ ಪೇಜಾವರ ಮಠದ ಕಿರಿಯ ಯತಿಗಳಾದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ಮಾತನಾಡಿ, ಸರ್ವರ ಸರ್ವ ರೀತಿಯ ಸಹಕಾರದಿಂದ ಈ ಸಂಸ್ಥೆ ಉತ್ತಮ ರೀತಿಯಲ್ಲಿ ಸೇವೆ ನೀಡುತ್ತಿದೆ. ಇದರ ಪ್ರಯೋಜನವನ್ನು ಅಗತ್ಯವಿರುವ ಎಲ್ಲರೂ ಪಡೆಯುವಂತಾಗಲಿ ಎಂದರು.

ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು, ಅದಮಾರು ಕಿರಿಯ ಯತಿಗಳಾದ ಶ್ರೀಈಶಪ್ರಿಯತೀರ್ಥ ಶ್ರೀಪಾದು ಅನುಗ್ರಹ ಸಂದೇಶ ನೀಡಿದರು. 

ಮುಖ್ಯ ಅತಿಥಿಗಳಾಗಿ ಡಾ.ಎ.ವಿ.ಬಾಳಿಗಾ ಆಸ್ಪತ್ರೆಯ ನಿರ್ದೇಶಕ ಡಾ. ಪಿ.ವಿ.ಭಂಡಾರಿ, ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ನಿರಂಜನ ಭಟ್, ರೋಟರಿ ಉಡುಪಿ ಅಧ್ಯಕ್ಷ ಚಂದ್ರಶೇಖರ ಅಡಿಗ ಭಾಗವಹಿಸಿದ್ದರು.

ಟ್ರಸ್ಟಿ ರಘುರಾಮ ಆಚಾರ್ಯ ಸ್ವಾಗತಿಸಿ, ರಾಮಚಂದ್ರ ಉಪಾದ್ಯಾಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಡಾ.ಪಿ. ವಿ.ಭಂಡಾರಿ ಹಾಗೂ ಡಾ.ನಾಗರಾಜಮೂರ್ತಿ ಇವರು ವಿಶೇಷ ಮಕ್ಕಳ ನಿರ್ವಹಣೆಯ ಬಗ್ಗೆ ಪೋಷಕರಿಗೆ ತರಬೇತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News