ಅಯೋಧ್ಯೆ ವಿವಾದ: ತಜ್ಞರ ಸಮಿತಿ ಪುನರ್ ಪರಿಶೀಲನೆಗೆ ಪಿಎಫ್ಐ ಆಗ್ರಹ
ಮಂಗಳೂರು: ಅಯೋಧ್ಯೆ ವಿವಾದದ ಕುರಿತು ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಪ್ರತಿಕ್ರಿಯಿಸಿರುವ ಪಾಪ್ಯುಲರ್ ಫ್ರಂಟ್, ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ನಡೆಯುವ ಮಧ್ಯಸ್ಥಿಕೆ ಪ್ರಕ್ರಿಯೆಯನ್ನು ಸ್ವಾಗತಿಸಿರುವುದಾಗಿ ಹೊಸದಿಲ್ಲಿಯಲ್ಲಿ ನಡೆದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟೀಯ ಕಾರ್ಯಕಾರಿ ಸಭೆಯಲ್ಲಿ ಹೇಳಿಕೆ ನೀಡಿದೆ.
ಆದರೆ ಮೂರು ಸದಸ್ಯರ ಸಮಿತಿಯಲ್ಲಿ ವಿವಾದಾತ್ಮಕ ವ್ಯಕ್ತಿ ಶ್ರೀ ರವಿ ಶಂಕರ್ ಅವರನ್ನು ಸೇರ್ಪಡೆಗೊಳಿಸಿರುವುದನ್ನು ಸಭೆಯು ತೀವ್ರವಾಗಿ ಖಂಡಿಸಿದೆ. ನಿವೃತ್ತ ನ್ಯಾಯಾಧೀಶರ ಬದಲಾಗಿ, ಪ್ರಧಾನ ನ್ಯಾಯಾಧೀಶರು ಸಮಿತಿಗೆ ನೇತೃತ್ವ ವಹಿಸಿದರೆ ಅದು ಹೆಚ್ಚು ಅರ್ಥಪೂರ್ಣವಾಗುತ್ತದೆ ಎಂದು ಸಭೆ ಒತ್ತಾಯಿಸಿದೆ.
ಬಾಬರಿ ಮಸೀದಿ ಧ್ವಂಸವಾದ ಸ್ಥಳದಲ್ಲಿ ರಾಮ ಮಂದಿರವನ್ನು ನಿರ್ಮಿಸಲು ಶ್ರೀ ರವಿ ಶಂಕರ್ ಅವರು ಬಹಿರಂಗ ಹೇಳಿಕೆ ನೀಡಿದ್ದು, ಅವರು ಬಾಬರಿ ಮಸೀದಿಯ ಹಕ್ಕು ಬಿಟ್ಟುಕೊಡಲು ಮತ್ತು ಅಯೋಧ್ಯೆಯ ಹೊರಗೆ ಮಸೀದಿ ನಿರ್ಮಿಸಲು ಮುಸ್ಲಿಮರನ್ನು ಒತ್ತಾಯಿಸುತ್ತಿದ್ದರು. ಅವರು ಅಯೋಧ್ಯೆಯ ಬಗ್ಗೆ ತಮ್ಮ ಪಟ್ಟು ಬಿಟ್ಟುಕೊಡದಿದ್ದರೆ ಸಿರಿಯಾ ಆಗಬಹುದು ಎಂದು ಮುಸ್ಲಿಮರಿಗೆ ಬೆದರಿಕೆಯೊಡ್ಡಿದ್ದರು ಎಂದು ವರದಿಯಾಗಿದೆ. ಇನ್ನೊಂದು ಸಂದರ್ಭದಲ್ಲಿ, ನ್ಯಾಯಾಲಯವು ದೇವಸ್ಥಾನದ ವಿರುದ್ಧ ಆದೇಶಿಸಿದರೆ ರಕ್ತಪಾತವಾಗುವುದು ಮತ್ತು ನ್ಯಾಯಾಲಯದ ಆದೇಶವನ್ನು ಕಾರ್ಯಗತಗೊಳಿಸಲು ಸಾಧ್ಯವಾಗುವುದಿಲ್ಲ ಎಂದು ಅವರು ಮಾಧ್ಯಮಕ್ಕೆ ತಿಳಿಸಿದ್ದರು. ಬಹಿರಂಗವಾಗಿ ಹಿಂಸಾಚಾರವನ್ನು ಪ್ರೇರೇಪಿಸುವ ಹಿನ್ನೆಲೆ ಹೊಂದಿರುವ ವಿವಾದಾಸ್ಪದ ವ್ಯಕ್ತಿಯು ಮಧ್ಯವರ್ತಿ ಪಾತ್ರವನ್ನು ನಿರ್ವಹಿಸಲು ನೇಮಕ ಮಾಡಲಾಗಿರುವುದು ಆಘಾತಕಾರಿಯಾಗಿದೆ. ಸಮಿತಿಯು ಶ್ರೀ ರವಿ ಶಂಕರ್ ಅವರ ಹೆಸರನ್ನು ಸಮಿತಿಯಿಂದ ತೆಗೆದುಹಾಕುವ ಮೂಲಕ ಆದೇಶವನ್ನು ಮಾರ್ಪಡಿಸಲು ಸುಪ್ರೀಂ ಕೋರ್ಟ್ ಪೀಠಕ್ಕೆ ಪಿಎಫ್ಐ ಮನವಿ ಮಾಡಿದೆ.
ರಾಜಕೀಯ ದುರುಪಯೋಗದ ಸಾಧ್ಯತೆಯಿರುವುದರಿಂದ ಲೋಕಸಭಾ ಚುನಾವಣೆಯ ಬಳಿಕ ಈ ವಿಷಯದಲ್ಲಿ ಮಧ್ಯಸ್ಥಿಕೆ ಪ್ರಕ್ರಿಯೆ ವಹಿಸಬೇಕೆಂದು ಸಭೆ ಅಭಿಪ್ರಾಯಯಿಸಿದೆ. ಲೋಕಸಭೆ ಚುನಾವಣೆಯ ನಂತರ ಸಂಧಾನಕಾರರ ತಿದ್ದುಪಡಿ ಮಾಡುವ ಮೂಲಕ ಮಧ್ಯಸ್ಥಿಕೆ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸಮಿತಿಗೆ ಸೂಚನೆ ನೀಡುವಂತೆ ಪಾಪ್ಯುಲರ್ ಫ್ರಂಟ್ ರಾಷ್ಟೀಯ ಕಾರ್ಯಕಾರಿ ಸಭೆ ಸುಪ್ರೀಂ ಕೋರ್ಟ್ ಗೆ ಮನವಿ ಮಾಡುತ್ತಿದೆ ಎಂದು ಪ್ರಕಟನೆ ತಿಳಿಸಿದೆ.