×
Ad

ವಿಂಗ್ ಕಮಾಂಡರ್ ಆಗಲು ಬಿಜೆಪಿಗೆ ಮತ ಹಾಕಿ ಎಂಬ ಪೋಸ್ಟ್: ಯೋಧರನ್ನು ಅವಮಾನಿಸಿದ ಚಕ್ರವರ್ತಿ ಸೂಲಿಬೆಲೆ

Update: 2019-03-10 13:24 IST

ಮಂಗಳೂರು, ಮಾ.10: ಪಾಕಿಸ್ತಾನದ ಬಾಲಕೋಟ್ ಉಗ್ರ ಶಿಬಿರಗಳ ಮೇಲೆ ವಾಯುಪಡೆ ದಾಳಿ ನಡೆಸಿದ ನಂತರ ಯೋಧರ ಸಾಹಸವನ್ನು ರಾಜಕೀಯ ಲಾಭ ಪಡೆಯಲು ರಾಜಕೀಯ ಪಕ್ಷಗಳು ಬಳಸಿಕೊಳ್ಳುತ್ತಿರುವುದು ಇತ್ತೀಚೆಗೆ ಕಂಡುಬಂದಿದೆ. ರಾಜಕೀಯ ಪಕ್ಷಗಳು ಸೈನಿಕರ ಹೆಸರಲ್ಲಿ ಲಾಭ ಪಡೆಯುವುದನ್ನು ತಡೆಯಬೇಕು ಎಂದು ನೌಕಾಪಡೆಯ ಮಾಜಿ ಮುಖ್ಯಸ್ಥ ಅಡ್ಮಿರಲ್ ಎಲ್. ರಾಮದಾಸ್ ಚುನಾವಣಾ ಆಯೋಗಕ್ಕೂ ಪತ್ರ ಬರೆದಿದ್ದರು. ಇದಾದ ನಂತರ ಚುನಾವಣಾ ಆಯೋಗ ಎಚ್ಚೆತ್ತಿದ್ದು, ರಾಜಕೀಯ ಪಕ್ಷಗಳು ಪ್ರಚಾರಕ್ಕೋಸ್ಕರ ಸೇನೆಯ ಚಿತ್ರಗಳನ್ನು ಬಳಸಬಾರದು ಎಂದು ಸೂಚನೆ ನೀಡಿದೆ.

ಆದರೆ ಇದೀಗ ಚುನಾವಣಾ ಆಯೋಗದ, ನೌಕಾಪಡೆಯ ಮಾಜಿ ಮುಖ್ಯಸ್ಥರ ಸೂಚನೆಗಳನ್ನು ನಿರ್ಲಕ್ಷಿಸಿ ಬಿಜೆಪಿಗೆ ಮತ ಯಾಚಿಸಲು ವಾಯುಪಡೆಯ ಪೈಲಟ್ ಅಭಿನಂದನ್ ಫೋಟೊ ಬಳಸಿದ ಚಕ್ರವರ್ತಿ ಸೂಲಿಬೆಲೆಗೆ ಜನರು ಛೀಮಾರಿ ಹಾಕಿದ್ದಾರೆ.

‘ನೀವು ವಿಂಗ್ ಕಮಾಂಡರ್ ಅಭಿನಂದನ್ ಆಗಬೇಕೆ?, ವೋಟಿಂಗ್ ಮಿಷನ್ ನಲ್ಲಿ ಕಮಲದ ಚಿಹ್ನೆ ಒತ್ತಿ ಏರ್ ಸ್ಟ್ರೈಕ್ ಅನುಭವ ಪಡೆಯಿರಿ’ ಎನ್ನುವ ವಿವಾದಾತ್ಮಕ, ಕೀಳುಮಟ್ಟದ ಪೋಸ್ಟ್ ಒಂದನ್ನು ಚಕ್ರವರ್ತಿ ಸೂಲಿಬೆಲೆ ಶೇರ್ ಮಾಡಿದ್ದಾರೆ.

ಸೂಲಿಬೆಲೆಯವರ ಈ ಪೋಸ್ಟ್ ಗೆ , “"ತುಪುಕ್. ಒಬ್ಬ ಸೈನಿಕನ ಫೋಟೋ ತೋರಿಸಿ ಓಟ್ ಹಾಕಿ ಅಂದಾಗಲೇ ನಿಮ್ಮ ಮೇಲಿಟ್ಟಿದ್ದ ಗೌರವ ತಳ ಹಿಡಿದಾಯ್ತು",  "ಥೂ ನಿನ್ನ ಜನ್ಮಕ್ಕೆ ಇದನ್ನು ರಾಜಕೀಯಕ್ಕೆ ಬಳಸಿಕೊಳ್ತೀದ್ದೀಯಲ್ಲ ನಾಚಿಕೆ ಆಗಲ್ವ?", "ಕೆರ ಕಿತ್ತೋಗುತ್ತೋ ನಿಂಗೆ ಸೂಲಿಬೆಲೆ", "ನೀವು ನಿಮ್ಮ ಹೊಲಸು ರಾಜಕೀಯಕ್ಕಾಗಿ ಈ ಮಟ್ಟಕ್ಕೆ ಇಳೀತೀರಂದ್ರೆ ನಾಚಿಗೆಯಾಗಬೇಕು. ನಿಮ್ಮ ಬಗ್ಗೆ ಅಭಿಮಾನ ಇಟ್ಟಿದ್ದೆ.. ಎಲ್ಲಾ ಹೊಲಸು ರಾಜಕೀಯದ ಹುಚ್ಚು ಹೊಳೆಲಿ ಕೊಚ್ಚಿ ಹೋಯ್ತು.. ಥತ್..", "ನಿಮ್ಮ ರಾಜಕೀಯ ದಾಹಕ್ಕೆ ಸೈನಿಕರನ್ನು ಬಲಿಪಶು ಮಾಡುತ್ತಿದೀರ ಥೂ ಲಜ್ಜೆಗೆಟ್ಟವರೆ" ಎಂದು ಫೇಸ್ಬುಕ್ ಬಳಕೆದಾರರು ಛೀಮಾರಿ ಹಾಕಿದ್ದಾರೆ.

ಬಿಜೆಪಿಗೆ ಮತ ಹಾಕುವ ಮೂಲಕ ವಿಂಗ್ ಕಮಾಂಡರ್ ಆಗಬಹುದು ಎಂದು ಹೇಳಿ ಚಕ್ರವರ್ತಿ ಸೂಲಿಬೆಲೆ ಸೈನಿಕರ ಹೋರಾಟ, ತ್ಯಾಗಗಳನ್ನು ಅವಮಾನಿಸಿದ್ದಾರೆ ಹಾಗು ಚುನಾವಣಾ ಆಯೋಗದ ಸೂಚನೆಯನ್ನು ಕಡೆಗಣಿಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಒತ್ತಾಯ ಕೇಳಿಬರುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News