×
Ad

'ಪದವಿ ಶಿಕ್ಷಣದ ಜೊತೆಗೆ ವೃತ್ತಿಪರ ಶಿಕ್ಷಣಕ್ಕೆ ಒತ್ತು ನೀಡಿ'

Update: 2019-03-10 15:39 IST

ಉಡುಪಿ, ಮಾ.10: ದುಡಿಯುವ ಕೈಗೆ ಉದ್ಯೋಗ ಸಿಗುವ ಹಾಗೆ ತಾಂತ್ರಿಕ ಶಿಕ್ಷಣ ಇರಬೇಕು. ವಿದ್ಯಾರ್ಥಿಗಳು ಪದವಿ ಶಿಕ್ಷಣದ ಜೊತೆಗೆ ವೃತ್ತಿಪರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದರೆ ಸ್ವಾವಲಂಬಿಗಳಾಗಲು ಸಹಕಾರಿಯಾಗುತ್ತದೆ ಎಂದು ಕಾಪು ಶಾಸ ಲಾಲಾಜಿ.ಆರ್ ಮೆಂಡನ್ ಹೇಳಿದ್ದಾರೆ.

ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಉಡುಪಿ ಇವರ ಸಹಯೋಗದೊಂದಿಗೆ ಮಣಿಪಾಲ ಶಿವಳ್ಳಿ ಕೈಗಾರಿಕಾ ಪ್ರದೇಶದ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಸಬಾಂಗಣದಲ್ಲಿ ನಡೆದ ನೂತನ ಜವಳಿ ನೀತಿ ಹಾಗೂ ಇಲಾಖೆಯ ವಿವಿಧ ಯೋಜನೆಗಳ ಕುರಿತು 2 ದಿನಗಳ ಉದ್ಯಮಶೀಲತಾ ಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದೆ ನೇಕಾರರು ಕೈ ಮಗ್ಗದ ಮೂಲಕ ಬಟ್ಟೆಗಳನ್ನು ತಯಾರಿಸುತ್ತಿದ್ದರು. ಆದರೆ ಕ್ರಮೇಣ ಪ್ರೋತ್ಸಾಹ ಹಾಗೂ ಸಹಕಾರದ ಕೊರತೆಯಿಂದ ಉದ್ಯಮ ಹಿನ್ನೆಡೆ ಕಂಡಿತು. ಪ್ರಸ್ತುತ ಯಂತ್ರಗಳ ಸಹಾಯದಿಂದ ಈ ಉದ್ಯಮ ಯಶಸ್ಸನ್ನು ಕಾಣುತ್ತಿದೆ. ತಾಂತ್ರಿಕ ಶಿಕ್ಷಣಕ್ಕೆ ದೇಶದ ವಿವಿದೆಡೆ ಹೆಚ್ಚಿನ ಬೇಡಿಕೆ ಇದೆ. ಆದರೆ ಮಾಹಿತಿ ಕೊರತೆಯಿಂದ ವಿದ್ಯಾರ್ಥಿಗಳು ಈ ಬಗ್ಗೆ ಒಲವು ತೋರಿಸುತ್ತಿಲ್ಲ. ವಿದ್ಯಾರ್ಥಿಗಳಿಗೆ ಇಂದು ಪದವಿ ಜೊತೆಗೆ ಬೇರೆ ಬೇರೆ ಕೋರ್ಸ್‌ಗಳನ್ನು ಕಲಿಯುವ ಅವಕಾಶಗಳಿವೆ. ಉದ್ಯಮಶೀಲತೆಯ ತರಬೇತಿ ನೀಡುವ ಇಂತಹ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಪಂ ಅಧ್ಯಕ್ಷ ದಿನಕರ ಬಾಬು ವಹಿಸಿದ್ದರು. ಅಲೆವೂರು ಗ್ರಾಪಂ ಅಧ್ಯಕ್ಷ ಶ್ರೀಕಾಂತ್ ನಾಯಕ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ರಮಾನಂದ ನಾಯಕ್, ಸಿಂಡಿಕೇಟ್ ಗ್ರಾಮೀಣ ಅಭಿವೃದ್ಧಿ ತರಬೇತಿ ಸಂಸ್ಥೆಯ ಮಂಜುನಾಥ್ ನಾಯಕ್, ಜಿಲ್ಲಾ ಸಣ್ಣಕೈಗಾರಿಕಾ ಸಂಘದ ಅಧ್ಯಕ್ಷಐ.ಆರ್ ಪೆರ್ನಾಂಡೀಸ್ ಉಪಸ್ಥಿತರಿದ್ದರು.

ಕೈಮಗ್ಗ ಮತ್ತು ಜವಳಿ ಇಲಾಖೆ ಸಹಾಯಕ ನಿರ್ದೇಶಕ ಧರಣೀಶ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ಸೀತಾರಾಮ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News