ಲೋಕಸಭೆ ಜೊತೆ ಈ ನಾಲ್ಕು ರಾಜ್ಯಗಳಿಗೆ ವಿಧಾನಸಭೆ ಚುನಾವಣೆ
ಹೊಸದಿಲ್ಲಿ,ಮಾ.10: 17ನೇ ಲೋಕಸಭಾ ಚುನಾವಣೆಯ ಜೊತೆಗೆ ಆಂಧ್ರಪ್ರದೇಶ, ಅರುಣಾಚಲಪ್ರದೇಶ, ಸಿಕ್ಕಿಂ ಹಾಗೂ ಒಡಿಶಾ ರಾಜ್ಯಗಳ ವಿಧಾನಸಭೆಗೂ ಚುನಾವಣೆ ನಡೆಯಲಿದೆಯೆಂದು ಚುನಾವಣಾ ಆಯೋಗ ರವಿವಾರ ಘೋಷಿಸಿದೆ. ತಮಿಳುನಾಡಿನ 18 ವಿಧಾನಸಭಾ ಕ್ಷೇತ್ರಗಳಿಗೂ ಉಪಚುನಾವಣೆ ನಡೆಯಲಿರುವುದಾಗಿ ಅದು ತಿಳಿಸಿದೆ.
ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಚುನಾವಣಾ ಆಧಿಕಾರಿ ಸುನೀಲ್ ಅವರು ಈ ವಿಷಯ ತಿಳಿಸಿದರು. ಆದಾಗ್ಯೂ, ಜಮ್ಮುಕಾಶ್ಮೀರದಲ್ಲಿ ಲೋಕಸಭಾ ಚುನಾವಣೆ ಮಾತ್ರ ನಡೆಯಲಿದ್ದು, ವಿಧಾನಸಭೆಗೆ ಚುನಾವಣೆ ನಡೆಸಲಾಗುವುದಿಲ್ಲವೆಂದು ಅವರು ಸ್ಪಷ್ಟಪಡಿಸಿದರು.
ತನ್ನಿಂದ ವಿಭಜನೆಗೊಂಡು ಪ್ರತ್ಯೇಕ ತೆಲಂಗಾಣ ರಾಜ್ಯ ಸ್ಥಾಪನೆಯಾದ ಬಳಿಕ ಆಂಧ್ರಪ್ರದೇಶ ಎದುರಿಸುತ್ತಿರುವ ಪ್ರಪ್ರಥಮ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆ ಇದಾಗಿದೆ. ಆಂಧ್ರಪ್ರದೇಶ ಪ್ರಸಕ್ತ 25 ಲೋಕಸಭೆ ಹಾಗೂ 175 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ.
ಸಿಕ್ಕಿಂನಲ್ಲಿ ಪವನ್ ಚಾಮ್ಲಿಂಗ್ ನೇತೃತ್ವದ ಸಿಕ್ಕಿಂ ಡೆಮಾಕ್ರಾಟಿಕ್ ಫ್ರಂಟ್ ಹಾಗೂ ಒಡಿಶಾದಲ್ಲಿ ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ ಆಡಳಿತ ನಡೆಸುತ್ತಿದೆ. ಅರುಣಾಚಲ ಪ್ರದೇಶದಲ್ಲಿ ಮುಖ್ಯಮಂತ್ರಿ ಪವನ್‌ಕುಮಾರ್ ಖಂಡು ನೇತೃತ್ವದ ಬಿಜೆಪಿ ಸರಕಾರ ಆಡಳಿತದಲ್ಲಿದೆ. 2016ರ ಡಿಸೆಂಬರ್‌ನಲ್ಲಿ ನಡೆದ ನಾಟಕೀಯ ವಿದ್ಯಮಾನದಲ್ಲಿ ಪೀಪಲ್ಸ್ ಪಾರ್ಟಿ ಆಫ್ ಅರುಣಆಚಲ (ಪಿಪಿಎ) ಪಕ್ಷದ 43 ಸದಸ್ಯರು ಸಾಮೂಹಿಕವಾಗಿ ಬಿಜೆಪಿಗೆ ಸೇರ್ಪಡೆಗೊಳ್ಳುವ ಮೂಲಕ, ಅಲ್ಲಿ ಕೇಸರಿ ಪಕ್ಷವು ಅಧಿಕಾರ ಹಿಡಿಯುವಲ್ಲಿ ಸಫಲವಾಗಿತ್ತು.
ಜಮ್ಮುಕಾಶ್ಮೀರ ವಿಧಾನಸಭಾ ಚುನಾವಣೆಯನ್ನು, ಅನಿಶ್ಚಿತಾವಧಿಗೆ ಮುಂದೂಡಿರುವುದನ್ನು ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ತೀವ್ರವಾಗಿ ಟೀಕಿಸಿದ್ದಾರೆ. ಚುನಾವಣೆಯನ್ನು ಮುಂದೂಡಲ್ಪಟ್ಟಿರುವುದು ಹಿಂದಿನ ಬಿಜೆಪಿ-ಪಿಡಿಪಿ ಸರಕಾರವು ಜಮ್ಮುಕಾಶ್ಮೀರವನ್ನು ಹೇಗೆ ಕೆಟ್ಟದಾಗಿ ನಿಭಾಯಿಸಿದೆಯೆಂಬುದನ್ನು ತೋರಿಸಿ ಕೊಟ್ಟಿದೆಯೆಂದು ಅವರು ಕಟಕಿಯಾಡಿದ್ದಾರೆ. ವಿಧಾನಸಭಾ ಚುನಾವಣೆಯನ್ನು ಮುಂದೂಡುವ ಮೂಲಕ ಪ್ರಧಾನಿ ಮೋದಿ, ಪಾಕಿಸ್ತಾನಕ್ಕೆ ಶರಣಾಗಿದ್ದಾರೆಂದು ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.
ದಿನಕರನ್ ಬಣಕ್ಕೆ ತಮ್ಮ ನಿಷ್ಠೆಯನ್ನು ಪ್ರದರ್ಶಿಸಿದ ತಮಿಳುನಾಡಿನ ಎಡಿಎಂಕೆ ಪಕ್ಷದ 18 ಶಾಸಕರನ್ನು ಅನರ್ಹಗೊಳಿಸಿದ ಹಿನ್ನೆಲೆಯಲ್ಲಿ ಈ ಕ್ಷೇತ್ರಗಳಿಗೆ ಚುನಾವಣೆ ನಡೆಯಬೇಕಿದೆ.
ತಮಿಳುನಾಡಿನ ಒಟ್ಟು 21 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಬೇಕಿದೆಯಾದರೂ, ಮೂರು ಕ್ಷೇತ್ರಗಳಲ್ಲಿ ಶಾಸಕರ ಅನರ್ಹತೆ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿಯಿರುವುದರಿಂದ ಉಳಿದ 18 ಕ್ಷೇತ್ರಗಳಿಗೆ ಮಾತ್ರವೇ ಉಪಚುನಾವಣೆ ನಡೆಯುತ್ತಿದೆ.
ಡಿಎಂಕೆ ನಾಯಕ ಕರುಣಾನಿಧಿ ಸೇರಿದಂತೆ ಇಬ್ಬರು ಶಾಸಕರು ನಿಧನರಾಗಿರುವ ಹಿನ್ನೆಲೆಯಲ್ಲಿ ಆ ಕ್ಷೇತ್ರಗಳು ತೆರವಾಗಿವೆ. ಇನ್ನೋರ್ವ ಎಡಿಎಂಕೆ ಶಾಸಕ ಪಿ.ಬಾಲಕೃಷ್ಣ ರೆಡ್ಡಿ ಅವರನ್ನು 1998ರ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಅನರ್ಹಗೊಳಿಸಿತ್ತು.