ಭೂಅತಿಕ್ರಮಣ ತೆರವಿನ ನೆಪದಲ್ಲಿ 200ಕ್ಕೂ ಅಧಿಕ ಮುಸ್ಲಿಮರ ಮನೆಗಳ ಧ್ವಂಸ

Update: 2019-03-10 15:30 GMT

ಹೊಸದಿಲ್ಲಿ,ಮಾ.10: ಉತ್ತರಪ್ರದೇಶದ ಮೀರತ್‌ ನಲ್ಲಿ ಭೂಅತಿಕ್ರಮಣವನ್ನು ತೆರವುಗೊಳಿಸುವ ನೆಪದಲ್ಲಿ ಸ್ಥಳೀಯಾಡಳಿತ ಸಂಸ್ಥೆಯ ಅಧಿಕಾರಿಗಳು 200ಕ್ಕೂ ಅಧಿಕ ಮುಸ್ಲಿಮರ ಮನೆಗಳನ್ನು ನೆಲಸಮಗೊಳಿಸಿದ್ದಾರೆ. ಅಕ್ರಮ ಮನೆಗಳ ತೆರವು ಕಾರ್ಯಾಚರಣೆಯ ಸಂದರ್ಭದಲ್ಲಿ, ಕೆಲವು ಕಿಡಿಗೇಡಿಗಳು ಪರಿಸರದಲ್ಲಿದ್ದ ಗೂಡಂಗಡಿಗಳಿಗೆ ಬೆಂಕಿ ಹಚ್ಚಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಆದಾಗ್ಯೂ, ಪೊಲೀಸರು ಗೂಡಂಗಡಿಗಳಿಗೆ ಬೆಂಕಿಹಚ್ಚಿದ್ದಾರೆಂದು ಮುಸ್ಲಿಂ ವ್ಯಕ್ತಿಯೊಬ್ಬರು ಆರೋಪಿಸುತ್ತಿರುವುದನ್ನು ತೋರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದೆ.

  ಮೀರತ್ ಕಂಟೊನ್ಮೆಂಟ್ ಮಂಡಳಿಯ ಸದಸ್ಯರು ಪೊಲೀಸರೊಂದಿಗೆ ರವಿವಾರ ಕೊಳೆಗೇರಿಗಳನ್ನು ತೆರವುಗೊಳಿಸಲು ಸದರ್ ‌ಬಜಾರ್ ಪ್ರದೇಶಕ್ಕೆ ಆಗಮಿಸಿದಾಗ ಹಿಂಸಚಾರ ಭುಗಿಲೆದಿತ್ತು. ಕೊಳೆಗೇರಿಗಳನ್ನು ತೆರವುಗೊಳಿಸಲು ಪೊಲೀಸರು ಮುಂದಾದಾಗ, ಆಕ್ರೋಶಗೊಂಡ ಸ್ಥಳೀಯ ನಿವಾಸಿಗಳು ಕಲ್ಲೆಸೆತದಲ್ಲಿ ತೊಡಗಿದರು. ಈ ಸಂದರ್ಭದಲ್ಲಿ ಕೆಲವು ದುಷ್ಕರ್ಮಿಗಳು, ಆಸುಪಾಸಿನಲ್ಲಿದ್ದ ಗೂಡಂಗಡಿಗಳಿಗೆ ಬೆಂಕಿ ಹಚ್ಚಿದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಅಜ್ಞಾತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಆರು ಮಂದಿಯನ್ನು ಬಂಧಿಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಮಾನವಹಕ್ಕುಗಳ ಸಂಘಟನೆ ‘ರಿಹಾಯಿಮಂಚ್’ನ ಸದಸ್ಯ ರಾಜೀವ್ ಯಾದವ್ ಅವರು. ‘‘ ಸಮಾಜವನ್ನು ಧ್ರುವೀಕರಿಸುವ ದುರುದ್ದೇಶದಿಂದ ಇತ್ತೀಚಿನ ದಿನಗಳಲ್ಲಿ ಉತ್ತರಪ್ರದೇಶದಲ್ಲಿ ಕಡಿಮೆ ತೀವ್ರತೆಯ ಹಿಂಸಾಚಾರದ ಘಟನೆಗಳಲ್ಲಿ ಏರಿಕೆಯಾಗಿವೆ. ಬಹುತೇಕ ಪ್ರಕರಣಗಳಲ್ಲಿ ಮುಸ್ಲಿಮರು ಕಡಿಮೆ ಸಂಖ್ಯೆಯಲ್ಲಿರುವ ಪ್ರದೇಶಗಳನ್ನು ಗುರಿಯಿರಿಸಲಾಗುತ್ತಿದೆ. ಅಲ್ಲೆಲ್ಲಾ ಮುಸ್ಲಿಮರಲ್ಲಿ ಭೀತಿಯನ್ನು ಹುಟ್ಟುಹಾಕುವ ಏಕೈಕ ಕಾರ್ಯಸೂಚಿಯೊಂದಿಗೆ, ಹಿಂಸಾಚಾರವನ್ನು ಪ್ರಚೋದಿಸಲು, ದಲಿತರನ್ನು ಬಳಸಿ ಕೊಳ್ಳಲಾಗುತ್ತಿದೆ. ಆ ಮೂಲಕ ಮುಸ್ಲಿಮರು ಪ್ರದೇಶವನ್ನು ತೊರೆದುಹೋಗುವಂತೆ ಮಾಡಲಾಗುತ್ತಿದೆಯೆಂದು ರಾಜೀವ್ ಯಾದವ್ ಆರೋಪಿಸಿದ್ದಾರೆ.

ಬಹುತೇಕ ಪ್ರಕರಣಗಳಲ್ಲಿ ಮುಸ್ಲಿಮರನ್ನು ಬಂಧಿಸಿ, ಅವರ ಮೇಲೆ ಕರಾಳವಾದ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ)ಯಡಿ ಪ್ರಕರಣ ದಾಖಲಿಸಲಾಗುತ್ತಿದೆ. ಎನ್‌ಎಸ್‌ಎ ಕಾಯ್ದೆಯಡಿ ಬಂಧಿತನಾದ ಯಾವುದೇ ವ್ಯಕ್ತಿಯು ದೇಶದ್ರೋಹಿಯೆನಿಸಿಕೊಳ್ಳುತ್ತಾನೆ. ಮುಸ್ಲಿಮರನ್ನು ದೇಶವಿರೋಧಿಗಳೆಂದು ಬಿಂಬಿಸುವುದೇ ಈ ಬೃಹತ್ ಕಾರ್ಯಸೂಚಿಯ ಉದ್ದೇಶವಾಗಿದೆ.

    ಮೀರತ್ ನಲ್ಲಿ ಮುಸ್ಲಿಮರನ್ನು ಒಕ್ಕಲೆಬ್ಬಿಸಿದ ಪ್ರಕರಣವನ್ನು ಮುಖ್ಯವಾಹಿನಿಯ ಬಹುತೇಕ ಮಾಧ್ಯಮಗಳು ಪ್ರಸಾರ ಮಾಡದಿರುವ ಬಗ್ಗೆ ಪ್ರತಿಕ್ರಿಯಿಸಿರುವ ನಿವೃತ್ತ ಪೊಲೀಸ್ ಮಹಾನಿರೀಕ್ಷಕ ಎಸ್.ಆರ್.ದಾರಾಪುರಿ ಅವರು, ‘‘ ಮಾಧ್ಯಮ ಹಾಗೂ ಪೊಲೀಸರು ಮುಸ್ಲಿಮರ ಬಗ್ಗೆ ಪೂರ್ವಾಗ್ರಹ ಹೊಂದಿದ್ದಾರೆ. ಅಲ್ಪಸಂಖ್ಯಾತರನ್ನು ಗಲಭೆಯ ರೂವಾರಿಗಳೆಂದು ಬಿಂಬಿಸುವ ಪ್ರಕರಣಗಳ ವರದಿ ಮಾಡಲು ಮುಖ್ಯವಾಹಿನಿಯ ಮಾಧ್ಯಮಗಳು ಆದ್ಯತೆ ನೀಡುತ್ತಿವೆ. ಆದರೆ ಅಲ್ಪಸಂಖ್ಯಾತರನ್ನು ಸಂತ್ರಸ್ತರಾಗುವಂತೆ ಮಾಡಿದ ಘಟನೆಗಳ ಬಗ್ಗೆ ಮಾಧ್ಯಮಗಳು ಹೆಚ್ಚಿನ ಬೆಳಕು ಚೆಲ್ಲುತ್ತಿಲ್ಲವೆಂದು ಅವರು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News