‘ವಿಶೇಷ ಮಕ್ಕಳಿಗೆ ಅನುಕಂಪ ಬೇಡ; ಮುಖ್ಯವಾಹಿನಿಗೆ ತರಲು ಯತ್ನಿಸಿ’

Update: 2019-03-10 16:09 GMT

ಮಂಗಳೂರು, ಮಾ.10: ‘ಗ್ರಾಮೀಣ ಪ್ರದೇಶದ ಮಾನಸಿಕ ಭಿನ್ನ ಸಾಮರ್ಥ್ಯದ ಮಕ್ಕಳಿಗೂ ವಿಶೇಷ ಶಾಲೆಗಳ ಅವಕಾಶ ದೊರಕಬೇಕು. ವಿಶೇಷ ಮಕ್ಕಳಿಗೆ ಅನುಕಂಪದ ಅಗತ್ಯವಿಲ್ಲ; ಬದಲಾಗಿ ಅಂತಹವರನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನಿಸಿ’ ಎಂದು ಆಳ್ವಾಸ್ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಡಾ.ಮೋಹನ್ ಆಳ್ವ ತಿಳಿಸಿದರು.

ನಗರದ ಕದ್ರಿ ಉದ್ಯಾನವನದಲ್ಲಿ ರವಿವಾರ ಹಮ್ಮಿಕೊಳ್ಳಲಾಗಿದ್ದ ಸಾನಿಧ್ಯ ಉತ್ಸವದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ‘ಇಬ್ಬರು ವಿದ್ಯಾರ್ಥಿಗಳನ್ನಿಟ್ಟುಕೊಂಡು ಆರಂಭಿಸಿದ ಸಾನಿಧ್ಯ ವಿಶೇಷ ಶಾಲೆಯು ಇಂದು 165 ಮಕ್ಕಳ ಸಾಮರ್ಥ್ಯವನ್ನು ಹೊಂದಿದೆ. ರಾಜ್ಯದಲ್ಲೇ ಪ್ರಥಮ ವಿಶೇಷ ಮಕ್ಕಳ ವಸತಿ ಶಾಲೆ ಎಂಬ ಹೆಗ್ಗಳಿಕೆಗೆ ‘ಸಾನಿಧ್ಯ’ ಪಾತ್ರವಾಗಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ದೇಶಕ್ಕೆ 70 ಸಾವಿರದಷ್ಟು ವರ್ಷಗಳ ಇತಿಹಾಸವಿದೆ. ನಮ್ಮ ಪೂರ್ವಜರು ಧನಾತ್ಮಕ, ಋಣಾತ್ಮಕವಾದಂತಹ ಸಂಘರ್ಷಗಳಲ್ಲಿ ತೊಡಗಿಕೊಳ್ಳುತ್ತಾ ದೇಶವನ್ನು ಈ ಸ್ಥಿತಿಗೆ ತಂದಿದ್ದಾರೆ. ಸ್ವಾತಂತ್ರ ಬಂದು ಇಷ್ಟು ವರ್ಷಗಳಾದರೂ ಅಂತರ-ಕಂದಕಗಳಿವೆ. ದೇಶದಲ್ಲಿ ಐಶ್ವರ್ಯವಂತರು, ವಿದ್ಯಾವಂತರು, ಸಾಮರ್ಥ್ಯವಂತರು ಇರುವ ವರ್ಗದ ಜೊತೆಗೆ ಬಡವರು, ನಿರ್ಗತಿಕರು, ನಿರಾಶ್ರಿತರು ಇದ್ದಾರೆ. ಅದರಲ್ಲಿ ಶೇ.4ರಷ್ಟು ವಿಶೇಷ ಅಂಗವಿಕಲ ಮಕ್ಕಳಿದ್ದಾರೆ ಎಂದರು. ಗೌರವ ಅತಿಥಿಯಾಗಿ ಆಗಮಿಸಿದ್ದ ರವಿ ಶೆಟ್ಟಿ ಮಾತನಾಡಿದರು.

ಸಮಾರಂಭದಲ್ಲಿ ಸಿಯಾನ್ ಆಶ್ರಮ ಟ್ರಸ್ಟ್‌ನ ಯು.ಸಿ.ಪೌಲೋಸ್, ವಿನಾಯಕ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಎಚ್.ವಿ.ಗೋಪಾಲಪ್ಪ, ಯಕ್ಷಗಾನ ಕಲಾವಿದರಾದ ಪುತ್ತೂರು ದೇವರಾಜ ಹೆಗ್ಡೆ, ದಿವಾಕರ ಆಚಾರ್ಯ ಪೊಳಲಿ ಹಾಗೂ ಚಂದ್ರಶೇಖರ್ ಅವರಿಗೆ ಸಾನಿಧ್ಯ ಉತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರೊ.ರಾಧಾಕೃಷ್ಣ ಕೆ., ಕಸ್ತೂರಿ ಮಾರ್ಲ, ಬಿ.ಎಸ್.ಮುಹಮ್ಮದ್ ಬಶೀರ್, ಶಿಕ್ಷಕಿಯರಾದ ಗ್ರೇಸಿ, ಶಾರದಾ, ಅಶ್ವಿತಾ ಶೆಟ್ಟಿ, ರಾಧಿಕಾ, ರಜನಿ ಮತ್ತಿತರರಿದ್ದರು. ಸಮಾರಂಭದಲ್ಲಿ ಸಾನಿಧ್ಯ ರೆಸಿಡೆನ್ಶಿಯಲ್ ಸ್ಕೂಲ್‌ನ ಆಡಳಿತಾಧಿಕಾರಿ ಡಾ.ವಸಂತಕುಮಾರ್ ಶೆಟ್ಟಿ ಸ್ವಾಗತಿಸಿದರು. ಸೋಫಿಯಾ ಡಿಸೋಜ ಹಾಗೂ ವೀಕ್ಷಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಮಹಾಬಲ ಮಾರ್ಲ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News