ಜಮ್ಮು ಕಾಶ್ಮೀರ: 2 ತಿಂಗಳಲ್ಲಿ 55ಕ್ಕೂ ಹೆಚ್ಚು ಯೋಧರು ಮೃತ್ಯು

Update: 2019-03-10 16:25 GMT

ಹೊಸದಿಲ್ಲಿ, ಮಾ.10: ಜಮ್ಮು ಮತ್ತು ಕಾಶ್ಮೀರದಲ್ಲಿ ಈ ವರ್ಷದ ಆರಂಭದ ಎರಡು ತಿಂಗಳು ಅತ್ಯಂತ ಹಿಂಸಾತ್ಮಕವಾಗಿದ್ದು , ಎರಡು ತಿಂಗಳಲ್ಲೇ 55ಕ್ಕೂ ಹೆಚ್ಚು ಯೋಧರು ಸಾವನ್ನಪ್ಪಿದ್ದಾರೆ ಎಂದು ‘ಸೌತ್ ಏಶ್ಯ ಟೆರರಿಸಂ ಪೋರ್ಟಲ್’ ತಿಳಿಸಿದೆ.

ಅಲ್ಲದೆ ಕಳೆದ ವರ್ಷ ಭದ್ರತಾ ಪಡೆಗಳ ಪಾಲಿಗೆ ಅತ್ಯಂತ ಕಠೋರ ವರ್ಷವಾಗಿ ಪರಿಣಮಿಸಿದ್ದು, 100 ಯೋಧರು ಸಾವನ್ನಪ್ಪಿದ್ದಾರೆ. 2017ರಲ್ಲಿ 83 ಯೋಧರು ಸಾವನ್ನಪ್ಪಿದ್ದರು. ಫೆಬ್ರವರಿ 14ರಂದು ಪುಲ್ವಾಮದಲ್ಲಿ ಭಯೋತ್ಪಾದಕರ ಆತ್ಮಾಹುತಿ ದಾಳಿಯಲ್ಲಿ ಸಿಆರ್‌ಪಿಎಫ್‌ನ 40 ಯೋಧರು ಮೃತಪಟ್ಟಿದ್ದು, ಆ ಬಳಿಕ ಭಯೋತ್ಪಾದಕರ ದಾಳಿಯಲ್ಲಿ ಐವರು ಯೋಧರು ಹಾಗೂ 10 ಭದ್ರತಾ ಪಡೆ ಸಿಬ್ಬಂದಿ ಹತರಾಗಿದ್ದಾರೆ. ಇದೇ ವೇಳೆ, ಭದ್ರತಾ ಪಡೆಗಳ ಕಾರ್ಯಾಚರಣೆಯಿಂದ ಮೃತಪಟ್ಟ ಉಗ್ರರ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ಈ ವರ್ಷ ಫೆ.14ರವರೆಗೆ 28 ಉಗ್ರರು ಹತರಾಗಿದ್ದರೆ ಆ ಬಳಿಕ 16 ಉಗ್ರರನ್ನು ಹತ್ಯೆ ಮಾಡಲಾಗಿದೆ.

2018ರಲ್ಲಿ ಭದ್ರತಾ ಪಡೆಗಳು 260 ಉಗ್ರರನ್ನು ಹತ್ಯೆ ಮಾಡಿದ್ದು ಇದು ಕಳೆದ 8 ವರ್ಷಗಳಲ್ಲೇ ಅತ್ಯಧಿಕವಾಗಿದೆ. 2010ರಲ್ಲಿ 270 ಉಗ್ರರನ್ನು ಹತ್ಯೆ ಮಾಡಲಾಗಿತ್ತು. ಜೊತೆಗೆ, ಗಡಿನಿಯಂತ್ರಣ ರೇಖೆಯ ಬಳಿ ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆಯೂ ಹೆಚ್ಚಿದೆ. ಫೆ.14ರವರೆಗೆ 267 ಬಾರಿ ಕದನ ವಿರಾಮ ಉಲ್ಲಂಘನೆಯಾಗಿದ್ದರೆ ಆ ಬಳಿಕ 228 ಕದನ ವಿರಾಮ ಉಲ್ಲಂಘನೆ ಪ್ರಕರಣ ನಡೆದಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News