×
Ad

ಮೀನುಗಾರರ 50 ಸಾವಿರ ರೂ. ವರೆಗಿನ ಸಾಲಮನ್ನಾಕ್ಕೆ ಒತ್ತಡ: ಸಿದ್ದರಾಮಯ್ಯ

Update: 2019-03-10 21:59 IST

ಉಡುಪಿ, ಮಾ.10: ಲೋಕಸಭಾ ಚುನಾವಣೆ ಪ್ರಕ್ರಿಯೆ ಮುಗಿದ ಬಳಿಕ ರೈತರು, ನೇಕಾರರಂತೆ ಮೀನುಗಾರರ 50 ಸಾವಿರ ರೂ. ವರೆಗಿನ ಸಾಲವನ್ನು ಮನ್ನಾ ಮಾಡಲು ರಾಜ್ಯ ಸಮ್ಮಿಶ್ರ ಸರಕಾರಕ್ಕೆ ಒತ್ತಡ ಹಾಕಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಅಂಬಲಪಾಡಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಹಾಗೂ ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆ ಜಂಟಿ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾ ಚರಣೆ ಅಂಗವಾಗಿ ಅಂಬಲಪಾಡಿ ಶ್ಯಾಮಿಲಿ ಸಭಾಂಗಣದಲ್ಲಿ ರವಿವಾರ ಆಯೋಜಿಸಲಾದ ಮೀನುಗಾರ ಮಹಿಳೆಯರಿಗೆ ಗೌರವಾರ್ಪಣೆ ಮತ್ತು ಸಾಧಕಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಈ ಹಿಂದಿನ ಸರಕಾರ ಮೀನುಗಾರರಿಗೆ ಅನೇಕ ಸೌಲಭ್ಯಗಳನ್ನು ಒದಗಿಸಿದೆ. ಬೇರೆ ಯಾವುದೇ ಸರಕಾರ ಈ ರೀತಿಯ ಸೌಲಭ್ಯವನ್ನು ಎಂದಿಗೂ ನೀಡಿಲ್ಲ. ಮೀನುಗಾರ ಮಹಿಳೆಯರಿಗೆ ಜಾರಿಗೆ ತಂದ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವ ಯೋಜನೆ ಈ ಸರಕಾರದಲ್ಲೂ ಮುಂದುವರೆಯುತ್ತಿದೆ. ಬಾಕಿ ಉಳಿದ ಬಡ್ಡಿ ಹಣ 15 ಕೋಟಿ ರೂ.ವನ್ನು ಸರಕಾರದಿಂದ ಭರಿಸುವ ಮೂಲಕ ಎಲ್ಲರನ್ನು ಋಣಮುಕ್ತರನ್ನಾಗಿಸಿದೆ ಎಂದು ಅವರು ಹೇಳಿದರು.

ಮೀನುಗಾರ ಮಹಿಳೆಯರು ಬಹಳ ಕಷ್ಟ ಜೀವಿಗಳು. ಪುರುಷರು ಮೀನು ಹಿಡಿದುಕೊಂಡು ಬಂದರೆ ಅದನ್ನು ಮಾರಾಟ ಮಾಡುವ ಮೂಲಕ ಮಾರುಕಟ್ಟೆ ಕಲ್ಪಿಸುವವರು ಮೀನುಗಾರ ಮಹಿಳೆಯರಾಗಿದ್ದಾರೆ. ಆದುದರಿಂದ ಅನಾದಿ ಕಾಲದಿಂದಲೂ ಈವರೆಗೆ ಮೀನುಗಾರಿಕೆ ವೃತ್ತಿ ಉಳಿದುಕೊಳ್ಳಲು ಪುರುಷರು ಮಾತ್ರವಲ್ಲದೆ ಮೀನುಗಾರರ ಮಹಿಳೆಯರು ಕೂಡ ಕಾರಣರಾಗಿದ್ದಾರೆ ಎಂದರು.

ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲ ಮಾತನಾಡಿ, ಮಹಿಳೆಯ ಶಕ್ತಿ ದೊಡ್ಡದ್ದು. ಮಹಿಳೆಯರಿಗೆ ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ಉತ್ತಮವಾಗಿ ನಿಬಾಯಿಸಬಲ್ಲರು. ಮಹಿಳೆಯರಿಗೆ ಬೇಕಾಗಿರುವುದು ಅವಕಾಶ ಮಾತ್ರ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಾಧಕಿ ಮೀನುಗಾರ ಮಹಿಳೆಯರಾದ ರತ್ನ ಮೊಗವೀರ ಸಿದ್ದಾಪುರ, ಚಿಕ್ಕು ಮೊಗವೀರ್ತಿ ಮೊಗಬೆಟ್ಟು, ನಾಗು ಮೊಗವೀರ್ತಿ ಬಟ್ಟೆಕುದ್ರು, ಕೊರತಿ ಮೊಗವೀರ್ತಿ ತೋಪ್ಲು(ಮೀನುಗಾರಿಕೆ) ಹಾಗೂ ನಾಗು ಮರಕಲ್ತಿ ಕಾರ್ಕಡ(ಸಮಾಜಸೇವೆ) ಅವರಿಗೆ ಸಾಧಕಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವೇದಿಕೆಯಲ್ಲಿ ರಾಜ್ಯ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್, ಮುಖ್ಯ ಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಅಮರ ನಾಥ್, ಜಿಲ್ಲಾ ಮೊಗವೀರ ಯುವ ಸಂಘಟನೆ ಅಧ್ಯಕ್ಷ ವಿನಯ್ ಕರ್ಕೇರ, ದ.ಕ. ಮತ್ತು ಉಡುಪಿ ಜಿಲ್ಲಾ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಮೊಗವೀರ ಯುವ ಸಂಘಟನೆಯ ಮಾಜಿ ಉಪಾಧ್ಯಕ್ಷೆ ಗೀತಾ ಕೋಟೇಶ್ವರ, ಕೆ.ಕೆ.ಕಾಂಚನ್ ಉಪಸ್ಥಿತರಿದ್ದರು.

ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಜಿ.ಶಂಕರ್ ಸ್ವಾಗತಿಸಿ, ಪ್ರಾಸ್ತಾವಿಕ ವಾಗಿ ಮಾತನಾಡಿದರು. ಮೊಗವೀರ ಯುವ ಸಂಘಟನೆಯ ಉಪಾಧ್ಯಕ್ಷ ಕೆ.ಎಂ.ಶಿವರಾಮ್ ನಿರೂಪಿಸಿ, ವಂದಿಸಿದರು.

‘ಚುನಾವಣೆಯಲ್ಲಿ ನಮ್ಮ ಕೈ ಬಿಡಬೇಡಿ’

‘ನಾನು ಎಂದಿಗೂ ಮೀನುಗಾರರ ಪರವಾಗಿರುತ್ತೇನೆ. ನಾನು ಹಣಕಾಸು ಸಚಿವನಾಗಿದ್ದಾಗ ಮೀನುಗಾರಿಕಾ ಬೋಟುಗಳಿಗೆ ಡಿಸೇಲ್ ಸಬ್ಸಿಡಿಯನ್ನು ಮೊತ್ತ ಮೊದಲ ಬಾರಿಗೆ ನೀಡಿದೆ. ಈ ಕೆಲಸ ಮಾಡಿರುವುದು ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಅಲ್ಲ. ಹಾಗಾಗಿ ನೀವು ಈ ಬಾರಿ ನಮ್ಮ ಜೊತೆಯಲ್ಲೇ ಇರಬೇಕು. ನಮ್ಮ ಕೈ ಬಿಡಬಾರದು. ನಿಮಗೆ ಸಹಾಯ ಮಾಡುವವರ ಹಾಗೂ ಕಷ್ಟಸುಖಗಳಲ್ಲಿ ಭಾಗಿಯಾಗುವವರನ್ನು ರಾಜಕೀಯದಲ್ಲಿ ಕೈಹಿಡಿಯಬೇಕು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಕೂಡ ಪಕ್ಷಕ್ಕೆ ಆಶೀ ರ್ವಾದ ಮಾಡಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಋಣ ತೀರಿಸುವ ಕಾರ್ಯಕ್ರಮ

ಮೀನುಗಾರ ಮಹಿಳೆಯರ 15 ಕೋಟಿ ಬಡ್ಡಿಮನ್ನಾ, ಶೂನ್ಯ ಬಡ್ಡಿದರದಲ್ಲಿ ಸಾಲ, ಸಾಲಮನ್ನಾ ಕೂಡ ಮಾಡಿರುವ ಸಿದ್ದರಾಮಯ್ಯ ಅವರ ಋಣ ತೀರಿಸುವ ಕಾರ್ಯಕ್ರಮ ಇದಾಗಿದೆ. ಯಾವುದೇ ನೀತಿ ಸಂಹಿತೆ ಜಾರಿ ಯಾದರೂ ಸಿದ್ಧರಾಮಯ್ಯ ನಮಗೆ ಮಾಡಿರುವ ಸಹಾಯಕ್ಕೆ ನಾವು ಋಣ ತೀರಿಸಬೇಕಾಗಿದೆ ಎಂದು ಜಿ.ಶಂಕರ್ ಹೇಳಿದರು.

ನಮಗೆ ಸಿಗಬೇಕಾದ ಸೌಲಭ್ಯಗಳು ಸಿಗದೆ ನಾವು ಅತಂತ್ರರಾಗಿದ್ದಾರೆ. ಈ ಸ್ಥಿತಿಯಲ್ಲಿ ಮೀನುಗಾರರ ಮಹಿಳೆಯರ 100 ಕೋಟಿ ರೂ.ವರೆಗಿನ ಸಾಲವನ್ನು ಕೂಡ ಸರಕಾರ ಮನ್ನಾ ಮಾಡಬೇಕು. ಆಗ ನಾವು ಋಣಮುಕ್ತರಾಗುತ್ತಾರೆ. ಇದರಿಂದ 2.80 ಲಕ್ಷ ಮಹಿಳೆಯರಿಗೆ ಅನುಕೂಲವಾಗಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News