×
Ad

​ಲೋಕಸಭಾ ಚುನಾವಣೆಗೆ ನಾನು ಸ್ಪರ್ಧಿಯಲ್ಲ: ಸಿದ್ದರಾಮಯ್ಯ

Update: 2019-03-10 22:08 IST

ಉಡುಪಿ, ಮಾ.10: ಕೊಪ್ಪಳ ಸೇರಿದಂತೆ ರಾಜ್ಯದ ಯಾವುದೇ ಕ್ಷೇತ್ರದಿಂದಲೂ ನಾನು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್‌ನ ಪರಿವರ್ತನಾ ಸಮಾವೇಶದಲ್ಲಿ ಪಾಲ್ಗೊಳ್ಳಲು ಇಂದು ಉಡುಪಿಗೆ ಆಗಮಿಸಿದ ಸಿದ್ದರಾಮಯ್ಯ ಅವರು ಸುದ್ದಿಗಾರರೊಂದಿಗೆ ಮಾತನಾಡುತಿದ್ದರು. ಮಂಡ್ಯದಲ್ಲಿ ಬಹುತೇಕ ಜೆಡಿಎಸ್ ಅಭ್ಯರ್ಥಿಯೇ ಸ್ಪರ್ಧಿಸಲಿದ್ದು, ಕಾಂಗ್ರೆಸ್ ಇಲ್ಲಿ ತನ್ನ ಅಭ್ಯರ್ಥಿಯನ್ನು ನಿಲ್ಲಿಸುವುದಿಲ್ಲ ಎಂದರು. ಅಂಬರೀಷ್ ಅವರ ಪತ್ನಿ ಸುಮಲತಾ ಅವರ ಕುರಿತಂತೆ ಸಚಿವ ಎಚ್.ಡಿ.ರೇವಣ್ಣ ನೀಡಿದ ಹೇಳಿಕೆ ಒಳ್ಳೆಯ ಅಭಿರುಚಿಯಿಂದ ಕೂಡಿಲ್ಲ ಎಂದರು.

ರಾಜ್ಯದಲ್ಲಿರುವ ಮೈತ್ರಿ ಸರಕಾರ, ಮುಂದಿನ ಲೋಕಸಭಾ ಚುನಾವಣೆಯಲ್ಲಿ 20ಕ್ಕೂ ಅಧಿಕ ಸ್ಥಾನ ಗೆಲ್ಲುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. ಕೇಂದ್ರ ಸಚಿವ ಅನಂತ್‌ ಕುಮಾರ್ ಹೆಗಡೆ ಅವರ ಹೇಳಿಕೆ ಕುರಿತಂತೆ ಪ್ರಶ್ನಿಸಿದಾಗ, ಆತ ರಾಜಕೀಯದಲ್ಲಿ ಇರುವುದಕ್ಕೆ ನಾಲಾಯಕ್. ಆತನಿಗೆ ಸಂವಿಧಾನವೇ ಗೊತ್ತಿಲ್ಲ ಎಂದು ಟೀಕಿಸಿದರು.

ಸೇನೆ ಹೆಸರು ಬಳಕೆ ಸಲ್ಲದು: ಬಿಜೆಪಿ ಸೇನೆಯ ಹೆಸರನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ಯುದ್ಧಗಳು ಹಿಂದೆಯೂ ಆಗಿವೆ. ಪಾಕಿಸ್ತಾನದ ಜೊತೆ ಸಂಘರ್ಷ ನಡೆಯುತ್ತಲೇ ಇರುತ್ತದೆ. ಆದರೆ ಸೇನೆಯ ಹೆಸರನ್ನು ಚುನಾವಣೆಗೆ ಬಳಸಿಕೊಳ್ಳಬಾರದು. ಯೋಧರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುತ್ತಾರೆ. ಯಾವುದೇ ಪಕ್ಷ ಇದರ ಲಾಭ ಪಡೆಯಲು ಪ್ರಯತ್ನಿಸಬಾರದು ಎಂದ ಸಿದ್ದರಾಮಯ್ಯ, ಸೇನೆ ಹಾಗೂ ಸೈನಿಕರ ಹೆಸರನ್ನು ಚುನಾವಣಾ ಪ್ರಚಾರಕ್ಕೆ ಬಳಸದಂತೆ ಚುನಾವಣಾ ಆಯೋಗ ನೀಡಿರುವ ಆದೇಶವನ್ನು ಅವರು ಸ್ವಾಗತಿಸಿದರು.

ಈ ಈಶ್ವರಪ್ಪ ಕಳೆದ ಬಾರಿ ಸೋತಾಗಲೇ ರಾಜಕೀಯ ಸನ್ಯಾಸ ತೆಗೆದುಕೊಳ್ಳ ಬೇಕಿತ್ತು. ಸೋತಾಗ ಸನ್ಯಾಸ ತಗೊಳ್ಳದೇ ಈಗ ಯಾಕೆ ಹೇಳ್ತಿದ್ದಾರೆ. ಆತ ರಾಜೀನಾಮೆ ಕೊಡ್ತಾರಂತೆ, ನಾನು ಬಾದಾಮಿಯಲ್ಲಿ ರಾಜಿನಾಮೆ ಕೊಡ್ಬೇಕಂತೆ. ಇವರನ್ನು ಜನ ಹುಚ್ಚರು ಅಂತಾರೆ ಎಂದು ಲೇವಡಿ ಮಾಡಿದರು.

ವಿಶ್ರಾಂತಿ ಇಲ್ಲದೇ ದುಡಿಯಿರಿ: ರಾಜ್ಯದಲ್ಲಿ ಎಪ್ರಿಲ್ ತಿಂಗಳಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಹೀಗಾಗಿ ಲೋಕಸಭಾ ಚುನಾವಣೆಗೆ ಇನ್ನು 35 ದಿನಗಳು ಮಾತ್ರ ಉಳಿದಿದೆ. ಈ 35 ದಿನಗಳಲ್ಲಿ ಕಾರ್ಯಕರ್ತರು ಯಾರೂ ವಿಶ್ರಾಂತಿ ಪಡೆಯದೇ ಪಕ್ಷದ ಗೆಲುವಿಗೆ ಶ್ರಮಿಸಬೇಕು.

ನಮ್ಮ ಕಾರ್ಯಕರ್ತರು ಮತದಾರರ ಮನೆ ಮನೆಗೆ ಹೋಗಿ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಲು ಪ್ರೇರೇಪಿಸಬೇಕು ಎಂದು ಸಿದ್ದರಾಮಯ್ಯ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News