×
Ad

ಉಗ್ರ ಹಣಕಾಸು ನಿಗಾ ಗುಂಪಿನ ಮುಖ್ಯಸ್ಥ ಹುದ್ದೆಯಿಂದ ಭಾರತವನ್ನು ತೆಗೆಯಲು ಪಾಕ್ ಆಗ್ರಹ

Update: 2019-03-10 22:10 IST

ಇಸ್ಲಾಮಾಬಾದ್, ಮಾ. 10: ಭಯೋತ್ಪಾದಕರ ಆರ್ಥಿಕ ಮೂಲದ ಮೇಲೆ ನಿಗಾ ಇಡುವ ಅಂತರ್‌ರಾಷ್ಟ್ರೀಯ ಕಾವಲು ಸಂಸ್ಥೆ ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್)ನ ಏಶ್ಯ-ಪೆಸಿಫಿಕ್ ಜಂಟಿ ಗುಂಪಿನ ಸಹ-ಅಧ್ಯಕ್ಷ ಹುದ್ದೆಯಿಂದ ಭಾರತವನ್ನು ತೆಗೆಯಬೇಕು ಎಂಬುದಾಗಿ ಪಾಕಿಸ್ತಾನ ಎಫ್‌ಎಟಿಎಫ್‌ಗೆ ಮನವಿ ಮಾಡಿದೆ ಎಂದು ಪಾಕಿಸ್ತಾನದ ಹಣಕಾಸು ಸಚಿವಾಲಯ ಶನಿವಾರ ಹೇಳಿದೆ.

ಈಗ ಪಾಕಿಸ್ತಾನವು ಎಫ್‌ಎಟಿಎಫ್‌ನ ‘ಗ್ರೇ ಲಿಸ್ಟ್’ (ನಿಗಾದಲ್ಲಿರುವ ದೇಶಗಳ ಪಟ್ಟಿ)ನಲ್ಲಿದೆ. ಎಫ್‌ಎಟಿಎಫ್‌ನ ಕಪ್ಪುಹಣ ಬಿಳುಪು ಮತ್ತು ಭಯೋತ್ಪಾದಕರಿಗೆ ಹಣಕಾಸು ಪೂರೈಕೆ ನಿಗ್ರಹ ನಿಯಮಗಳನ್ನು ಪಾಲಿಸದ ದೇಶಗಳ ಪಟ್ಟಿಗೆ ಸೇರ್ಪಡೆಗೊಳ್ಳುವುದನ್ನು ತಪ್ಪಿಸಲು ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನ ಪರದಾಡುತ್ತಿದೆ. ಈ ಪಟ್ಟಿಗೆ ಸೇರಿಸಲ್ಪಟ್ಟರೆ, ಈಗಾಗಲೇ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವ ಪಾಕಿಸ್ತಾನ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುತ್ತದೆ ಎಂದು ಪರಿಣತರು ಹೇಳುತ್ತಾರೆ.

 ‘‘ಎಫ್‌ಎಟಿಎಫ್‌ನ ವಿಮರ್ಶಾ ಪ್ರಕ್ರಿಯೆಯನ್ನು ನ್ಯಾಯೋಚಿತ, ಪಕ್ಷಪಾತರಹಿತ ಮತ್ತು ವಸ್ತುನಿಷ್ಠವನ್ನಾಗಿಸುವುದಕ್ಕಾಗಿ ಏಶ್ಯ-ಪೆಸಿಫಿಕ್ ಜಂಟಿ ಗುಂಪಿನ ಸಹ ಅಧ್ಯಕ್ಷರನ್ನಾಗಿ ಭಾರತವಲ್ಲದೆ ಇತರ ಯಾವುದಾದರೊಂದು ಸದಸ್ಯ ದೇಶವನ್ನು ನೇಮಿಸಬೇಕು ಎಂಬುದಾಗಿ ಎಫ್‌ಎಟಿಎಫ್ ಅಧ್ಯಕ್ಷ ಮಾರ್ಶಲ್ ಬಲಿಂಗ್‌ಸ್ಲೀಗೆ ಬರೆದ ಪತ್ರದಲ್ಲಿ ಪಾಕಿಸ್ತಾನದ ಹಣಕಾಸು ಸಚಿವ ಅಸಾದ್ ಉಮರ್ ಒತ್ತಾಯಿಸಿದ್ದಾರೆ.

ಜಂಟಿ ಗುಂಪು, ಏಶ್ಯ ಪೆಸಿಫಿಕ್ ಗುಂಪಿನ ಅಂತರ್‌ರಾಷ್ಟ್ರೀಯ ಸಹಕಾರ ಪರಿಶೀಲನಾ ಗುಂಪಿನ (ಐಸಿಆರ್‌ಜಿ) ಉಪ ಗುಂಪಾಗಿದೆ.

ಪಾಕಿಸ್ತಾನ ಏಶ್ಯ ಪೆಸಿಫಿಕ್ ಗುಂಪಿನ ಸದಸ್ಯ ದೇಶವಾಗಿದೆ. ಪಾಕಿಸ್ತಾನಕ್ಕೆ ಸಂಬಂಧಿಸಿದ ಪ್ರಕರಣವನ್ನು ಏಶ್ಯ ಪೆಸಿಫಿಕ್ ಗುಂಪು ಎಫ್‌ಎಟಿಎಫ್ ಮುಂದೆ ಮಂಡಿಸುತ್ತಿದೆ.

ಭಾರತದ ಆರ್ಥಿಕ ಗುಪ್ತಚರ ಘಟಕ (ಎಫ್‌ಐಯು)ದ ಮಹಾನಿರ್ದೇಶಕರು ಜಂಟಿ ಗುಂಪಿನ ಸಹ ಅಧ್ಯಕ್ಷರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News