1969 ರಲ್ಲಿ ಸಿಕ್ಕಿತ್ತು ಪದವಿ: 50 ವರ್ಷಗಳ ನಂತರ ತಲುಪಿತು ಶುಭಾಶಯ!
ಮಿಶಿಗನ್, ಮಾ. 10: 1969ರಲ್ಲಿ ಅಮೆರಿಕದ ಮಿಶಿಗನ್ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿರುವುದಕ್ಕಾಗಿ ವ್ಯಕ್ತಿಯೊಬ್ಬರನ್ನು ಅಭಿನಂದಿಸಿ ಕುಟುಂಬದ ಸ್ನೇಹಿತರು ಕಳುಹಿಸಿದ ಟೆಲಿಗ್ರಾಮ್ ಕೊನೆಗೂ 50 ವರ್ಷಗಳ ಬಳಿಕ ಅವರನ್ನು ತಲುಪಿದೆ.
ರಾಬರ್ಟ್ ಫಿಂಕ್ ವೆಸ್ಟರ್ನ್ ಯೂನಿಯನ್ ಟೆಲಿಗ್ರಾಮನ್ನು ಈ ವರ್ಷ ಪಡೆದರು. ವೆಸ್ಟರ್ನ್ ಯೂನಿಯನ್ ತನ್ನ ಟೆಲಿಗ್ರಾಮ್ ಸೇವೆಯನ್ನು 2006ರಲ್ಲಿ ನಿಲ್ಲಿಸಿತ್ತು.
ಟೆಲಿಗ್ರಾಮ್ ಮೊದಲು, ಫಿಂಕ್ ತನ್ನ ಮೂವರು ಸಹಪಾಠಿಗಳೊಂದಿಗೆ ವಾಸಿಸುತ್ತಿದ್ದ ಆ್ಯನ್ ಆರ್ಬರ್‌ನ ಅಪಾರ್ಟ್‌ಮೆಂಟ್‌ಗೆ 1969ರಲ್ಲೇ ಬಂದಿತ್ತು. ಆದರೆ, ಅದಕ್ಕಿಂತ ಒಂದು ದಿನದ ಮೊದಲು ಅವರು ನ್ಯೂಯಾರ್ಕ್‌ನಲ್ಲಿರುವ ಸ್ನಾತಕೋತ್ತರ ಕಾಲೇಜಿಗೆ ಸೇರುವುದಕ್ಕಾಗಿ ಅಲ್ಲಿಂದ ಹೊರಟಿದ್ದರು.
ಕಳೆದ ವರ್ಷದ ಡಿಸೆಂಬರ್‌ನಲ್ಲಿ ಕ್ರಿಸ್ಟೀನಾ ಝಾಸ್ಕ್ ಎಂಬವರು ಆ್ಯನ್ ಆರ್ಬರ್‌ನಲ್ಲಿರುವ ಡಿಜಿಟಲ್ ಮಾರ್ಕೆಟಿಂಗ್ ಸಂಸ್ಥೆ ‘ಐಕಾನ್ ಇಂಟರ್ಯಾಕ್ಟಿವ್’ಗೆ ಸೇರಿದ ಹಳೆ ಕಡತಗಳ ಕಪಾಟಿನ ಕೆಳಗಿನ ಡ್ರಾಯರನ್ನು ಎಳೆದಾಗ ಈ ಟೆಲಿಗ್ರಾಮ್ ಪತ್ತೆಯಾಯಿತು. ಕಪಾಟಿಗೆ ಬಿದ್ದಿದ್ದ ಕಾಗದದ ತುಂಡೊಂದನ್ನು ತೆಗೆಯುತ್ತಿದ್ದಾಗ ಅದು ಅವರ ಕಣ್ಣಿಗೆ ಬಿದ್ದಿತ್ತು.
ಝಾಸ್ಕ್ ಇಂಟರ್‌ನೆಟ್‌ನಲ್ಲಿ ಫಿಂಕ್‌ರ ವಿಳಾಸವನ್ನು ಪತ್ತೆಹಚ್ಚಿ ಟೆಲಿಗ್ರಾಮನ್ನು ಮರಳಿಸಿದರು. ಈಗ ಫಿಂಕ್ ಆ್ಯನ್ ಆರ್ಬರ್‌ನಿಂದ 72 ಕಿ.ಮೀ. ದೂರದಲ್ಲಿರುವ ಡೆಟ್ರಾಯಿಟ್ ಉಪನಗರ ರೋಕೆಸ್ಟರ್‌ನಲ್ಲಿರುವ ಓಕ್‌ಲ್ಯಾಂಡ್ ವಿಶ್ವವಿದ್ಯಾನಿಲಯದಲ್ಲಿ ಪ್ರೊಫೆಸರ್ ಆಗಿದ್ದಾರೆ.