×
Ad

ಸಗ್ರಿ ಹಾಡಿಯಲ್ಲಿ ಬಾಲಕಿಯ ಶವ ಪತ್ತೆ: ಕೊಲೆ ಶಂಕೆ

Update: 2019-03-10 22:18 IST

ಮಣಿಪಾಲ, ಮಾ.10: ಶಿವಳ್ಳಿ ಗ್ರಾಮದ ಸಗ್ರಿ ಎಂಬಲ್ಲಿನ ಹಾಡಿಯಲ್ಲಿ ಇಂದು ಸಂಜೆ ವೇಳೆ ಬಾಲಕಿಯೊಬ್ಬಳ ಮೃತದೇಹ ಪತ್ತೆಯಾಗಿದ್ದು, ಈಕೆಯನ್ನು ಕುತ್ತಿಗೆ ಬಿಗಿದು ಕೊಲೆ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಮೃತಳನ್ನು ಬಾದಾಮಿ ಮೂಲದ ವಲಸೆ ಕಾರ್ಮಿಕರ ಪುತ್ರಿ ಎಂದು ತಿಳಿದು ಬಂದಿದೆ.

ನಿಟ್ಟೂರಿನಲ್ಲಿ ವಾಸವಾಗಿರುವ ಈಕೆ ಮಾ. 9 ರಂದು ಮಧ್ಯಾಹ್ನ ವೇಳೆ ತಾನು ಕೆಲಸ ಮಾಡುತ್ತಿದ್ದ ಉಡುಪಿಯ ಅಂಗಡಿಯಿಂದ ಮನೆಗೆ ಹೊರಟವಳು ನಾಪತ್ತೆಯಾಗಿದ್ದಳೆನ್ನಲಾಗಿದೆ.

ಇಂದು ಸಂಜೆ ಸಗ್ರಿಯ ಹಾಡಿಯಲ್ಲಿ ಬಾಲಕಿಯ ಮೃತದೇಹವೊಂದು ಪತ್ತೆಯಾಗಿರುವ ಬಗ್ಗೆ ಮಣಿಪಾಲ ಪೊಲೀಸರಿಗೆ ಮಾಹಿತಿ ದೊರೆತಿದ್ದು, ಅದರಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಮೃತದೇಹದ ಕೆಲವು ಭಾಗಗಳು ಕೊಳೆತ ಸ್ಥಿತಿಯಲ್ಲಿದ್ದು, ಕುತ್ತಿಗೆಗೆ ಶಾಲು ಬಿಗಿದಿರುವುದು ಕಂಡುಬಂದಿದೆ.

ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಮಣಿಪಾಲ ಶವಗಾರದಲ್ಲಿ ಇರಿಸಲಾಗಿದ್ದು, ಮನೆಯವರನ್ನು ಕರೆಸಿ ಮೃತದೇಹದ ಗುರುತು ಪತ್ತೆ ಮಾಡ ಲಾಗಿದೆ. ದುಷ್ಕರ್ಮಿಗಳು ಆಕೆಯನ್ನು ಹಾಡಿಗೆ ಕರೆದೊಯ್ದು ಕತ್ತು ಹಿಸುಕಿ ಕೊಲೆ ಮಾಡಿರಬಹುದೆಂದು ಶಂಕಿಸಲಾಗಿದೆ. ಬಾಲಕಿ ಮೇಲೆ ಅತ್ಯಾಚಾರ ಎಸಗಿ ರುವ ಬಗ್ಗೆ ಸಂಶಯ ವ್ಯಕ್ತವಾಗಿದ್ದು, ಆ ಹಿನ್ನೆಲೆಯಲ್ಲಿ ಮಣಿಪಾಲ ವಿಧಿ ವಿಜ್ಞಾನ ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತನಿಖೆಗಾಗಿ ನಾಲ್ಕು ತಂಡ ರಚನೆ

ಘಟನಾ ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್, ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಡಿವೈಎಸ್ಪಿ ಜೈಶಂಕರ್, ಮಹಿಳಾ ಠಾಣೆಯ ಪೊಲೀಸ್ ನಿರೀಕ್ಷಕ ಸಂಪತ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೊಂದು ಕೊಲೆ ಎಂಬುದು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ಹೆಚ್ಚುವರಿ ಎಸ್ಪಿ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News