ವಿಮಾನ ಪತನಗೊಂಡು 157 ಮಂದಿ ಮೃತ್ಯು: ಹಿಂದಿರುಗಲು ಬಯಸಿದ್ದ ಪೈಲಟ್

Update: 2019-03-10 16:52 GMT

ಅಡಿಸ್ ಅಬಾಬ, ಮಾ. 10: ಇಥಿಯೋಪಿಯ ರಾಜಧಾನಿ ಅಡಿಸ್ ಅಬಾಬದಿಂದ ಕೆನ್ಯ ರಾಜಧಾನಿ ನೈರೋಬಿಗೆ ಹೋಗುತ್ತಿದ್ದ ಇಥಿಯೋಪಿಯನ್ ಏರ್‌ಲೈನ್ಸ್‌ಗೆ ಸೇರಿದ ವಿಮಾನವೊಂದು ರವಿವಾರ ಬೆಳಗ್ಗೆ ಪತನಗೊಂಡಿದೆ ಹಾಗೂ ವಿಮಾನದಲ್ಲಿದ್ದ ಎಲ್ಲ 157 ಮಂದಿ ಮೃತಪಟ್ಟಿದ್ದಾರೆ.

ಬೋಯಿಂಗ್ 737-8 ಮ್ಯಾಕ್ಸ್ ವಿಮಾನದ ಪತನಕ್ಕೆ ಕಾರಣ ಏನು ಎನ್ನುವುದು ತಕ್ಷಣಕ್ಕೆ ಗೊತ್ತಾಗಿಲ್ಲ. ಅದು ಹೊಸ ವಿಮಾನವಾಗಿತ್ತು ಹಾಗೂ ಕಳೆದ ವರ್ಷದ ನವೆಂಬರ್‌ನಲ್ಲಷ್ಟೇ ಅದನ್ನು ಇಥಿಯೋಪಿಯ ಏರ್‌ಲೈನ್ಸ್ ಪಡೆದುಕೊಂಡಿತ್ತು.

ಸರಕಾರಿ ಒಡೆತನದ ಇಥಿಯೋಪಿಯ ಏರ್‌ಲೈನ್ಸ್ ಆಫ್ರಿಕದ ಅತ್ಯುತ್ತಮ ಏರ್‌ಲೈನ್ ಸಂಸ್ಥೆ ಎಂಬುದಾಗಿ ಪರಿಗಣಿಸಲ್ಪಟ್ಟಿದೆ.

‘‘ನೈರೋಬಿಗೆ ತೆರಳುತ್ತಿದ್ದ ವಿಮಾನದಲ್ಲಿ 149 ಪ್ರಯಾಣಿಕರು ಮತ್ತು ಎಂಟು ಸಿಬ್ಬಂದಿ ಇದ್ದರು ಎಂಬುದಾಗಿ ಭಾವಿಸಲಾಗಿದೆ. ಹಾರಾಟ ಆರಂಭಿಸಿದ ಆರು ನಿಮಿಷಗಳಲ್ಲಿ ವಿಮಾನ ಪತನಗೊಂಡಿತು. ಅಡಿಸ್ ಅಬಾಬದ ದಕ್ಷಿಣಕ್ಕೆ ಸುಮಾರು 50 ಕಿ.ಮೀ. ದೂರದ ಬಿಶೊಫು ಅಥವಾ ಡೆಬ್ರೆ ಝೀಟ್‌ನ ಸುತ್ತಮುತ್ತ ಬೆಳಗ್ಗೆ 8:44ರ ಸುಮಾರಿಗೆ ವಿಮಾನ ಪತನಗೊಂಡಿದೆ’’ ಎಂದು ಇಥಿಯೋಪಿಯ ಏರ್‌ಲೈನ್ಸ್‌ನ ಹೇಳಿಕೆಯೊಂದು ತಿಳಿಸಿದೆ.

ವಿಮಾನದಲ್ಲಿ 33 ದೇಶಗಳ ನಾಗರಿಕರು ಪ್ರಯಾಣಿಸುತ್ತಿದ್ದರು ಎಂದು ಇಥಿಯೋಪಿಯದ ಸರಕಾರಿ ಸುದ್ದಿವಾಹಿನಿ ಇಬಿಸಿ ವರದಿ ಮಾಡಿದೆ.

ಇದೇ ಮಾದರಿಯ ವಿಮಾನ ಹಿಂದೆಯೂ ಪತನ

ಅಕ್ಟೋಬರ್‌ನಲ್ಲಿ ಇಂಡೋನೇಶ್ಯ ರಾಜಧಾನಿ ಜಕಾರ್ತದಿಂದ ದೇಶದ ಇನ್ನೊಂದು ಪಟ್ಟಣಕ್ಕೆ ಹೋಗುತ್ತಿದ್ದ ಇನ್ನೊಂದು ಬೋಯಿಂಗ್ 737-8 ಮ್ಯಾಕ್ಸ್ ವಿಮಾನವು ಜಾವಾ ಸಮುದ್ರದಲ್ಲಿ ಪತನಗೊಂಡಿರುವುದನ್ನು ಸ್ಮರಿಸಬಹುದಾಗಿದೆ. ಅದರಲ್ಲಿದ್ದ ಎಲ್ಲ 189 ಮಂದಿ ಮೃತಪಟ್ಟಿದ್ದಾರೆ.

ಹಿಂದಿರುಗಲು ಬಯಸಿದ್ದ ಪೈಲಟ್

 ವಿಮಾನವು ಪತನಗೊಳ್ಳುವುದಕ್ಕೆ ಮೊದಲು, ತಾನು ಸಮಸ್ಯೆಗಳನ್ನು ಎದುರಿಸುತ್ತಿದ್ದೇನೆ ಎಂಬ ಸಂದೇಶವನ್ನು ಪೈಲಟ್ ವಾಯು ನಿಯಂತ್ರಣ ಸಿಬ್ಬಂದಿಗೆ ನೀಡಿದ್ದರು ಹಾಗೂ ವಿಮಾನ ನಿಲ್ದಾಣಕ್ಕೆ ಹಿಂದಿರುಗಲು ಬಯಸಿದ್ದರು ಎಂದು ಇಥಿಯೋಪಿಯನ್ ಏರ್‌ಲೈನ್ಸ್ ಹೇಳಿದೆ.

ಅಡಿಸ್ ಅಬಾಬ ವಿಮಾನ ನಿಲ್ದಾಣಕ್ಕೆ ಹಿಂದಿರುಗಲು ಪೈಲಟ್‌ಗೆ ಅನುಮತಿ ನೀಡಲಾಗಿತ್ತು ಎಂದು ವಿಮಾನಯಾನ ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟೆವೊಲ್ಡೆ ಗೆಬ್ರೆ ಮರಿಯಮ್ ಅಡಿಸ್ ಅಬಾಬದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News