ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗೆ ಮಾಧ್ಯಮಗಳ ಪಾತ್ರ ಹಿರಿದು: ಆನಂದ ಪಟುವರ್ಧನ್
ಮಂಗಳೂರು, ಮಾ.10: ಸಮಾಜದಲ್ಲಿ ಸಕಾರಾತ್ಮಕವಾದ ಬದಲಾವಣೆಗಳನ್ನು ಉಂಟು ಮಾಡುವ ನಿಟ್ಟಿನಲ್ಲಿ ಮಾಧ್ಯಮಗಳ ಪಾತ್ರ ಹಿರಿದಾಗಿದೆ ಎಂದು ಖ್ಯಾತ ಸಾಕ್ಷ ಚಿತ್ರ ನಿರ್ಮಾಪಕ ಆನಂದ ಪಟುವರ್ಧನ್ ತಿಳಿಸಿದ್ದಾರೆ.
ನಗರದ ಸೈಂಟ್ ಆಲೋಶಿಯಸ್ ಕಾಲೇಜಿನಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮ ಸ್ನಾತಕೋತ್ತರ ವಿದ್ಯಾರ್ಥಿಗಳ ವಿಭಾಗದ ವತಿಯಿಂದ ಹಮ್ಮಿಕೊಂಡ ಮೀಡಿಯಾ ಮಂಥನ 2019 ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಿದ್ದರು.
ದೇಶದಲ್ಲಿರುವ ಸಮಸ್ಯೆಗಳನ್ನು ಮರೆಮಾಚಿ ವೈಭವೀಕರಣದ ಚಿತ್ರಗಳನ್ನು ಮಾತ್ರ ಜನರ ಮುಂದಿಟ್ಟರೆ ಸಮಾಜದಲ್ಲಿ ಬದಲಾವಣೆ ಸಾಧ್ಯವಾಗುವುದಿಲ್ಲ. ಜನರ ನೋವು ನಲಿವುಗಳನ್ನು, ಜ್ವಲಂತ ಸಮಸ್ಯೆಗಳನ್ನು ಮನದಟ್ಟು ಮಾಡುವ ಮೂಲಕ ಬದಲಾವಣೆಗೆ ಪೂರಕವಾಗುವ ಮಾಧ್ಯಮಗಳ ಅಗತ್ಯವಿದೆ. ದೇಶದ ಬಹುತೇಕ (ಎಲೆಕ್ಟ್ರಾನಿಕ್) ಮಾಧ್ಯಮಗಳು ಕಾರ್ಪೊರೇಟ್ ಶಕ್ತಿಗಳ ಹಿಡಿತದಲ್ಲಿರುವ ಕಾರಣ ಜನರ ನೈಜ ಸಮಸ್ಯೆಗಳನ್ನು ಬಿಂಬಿಸುವಲ್ಲಿ ವಿಫಲವಾಗಿದೆ. ದೇಶದ ಆಡಳಿತ ವಲಯದಲ್ಲೂ ಈ ಕಾರ್ಪೊರೇಟ್ ಶಕ್ತಿಗಳು ತಮ್ಮ ಹಿಡಿತವನ್ನು ಹೊಂದಿದೆ ಎಂದು ಪಟುವರ್ಧನ್ ತಿಳಿಸಿದ್ದಾರೆ.
ಫ್ಯಾಸಿಸ್ಟ್ ಶಕ್ತಿಗಳು ದೇಶದ ಅಧಿಕಾರ ಹಿಡಿದರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಇನ್ನಷ್ಟು ಅಪಾಯ
ದೇಶದ ಎಲ್ಲಾ ಅಧಿಕಾರವನ್ನು ಫ್ಯಾಸಿಸ್ಟ್ ಶಕ್ತಿಗಳು ಪಡೆದುಕೊಂಡರೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಇನ್ನಷ್ಟು ಅಪಾಯ ಉಂಟಾಗಲಿದೆ ಎಂದು ಆನಂದ ಪಟುವರ್ಧನ್ ತಿಳಿಸಿದ್ದಾರೆ.
ಭಾರತದಲ್ಲಿ ಬ್ರಿಟೀಷರು ತಮ್ಮ ಆಳ್ವಿಕೆಗಾಗಿ ದೇಶವನ್ನು ವಿಭಜಿಸಿ ಆಳ್ವಿಕೆ ನಡೆಸಿದರು. ಪರಿಣಾಮವಾಗಿ ಬೆಳೆದುಕೊಂಡ ಕೋಮುದ್ವೇಷದ ಜೊತೆ ಹುಟ್ಟಿಕೊಂಡ ಫ್ಯಾಸಿಸ್ಟ್ ಶಕ್ತಿಗಳು ದೇಶದಲ್ಲಿ ಸಕ್ರೀಯವಾಗಿದೆ. ಅವುಗಳು ಎಲ್ಲಾ ಅಧಿಕಾರವನ್ನು ತಮ್ಮ ಕೈಗೆ ತೆಗೆದುಕೊಳ್ಳಲು ತಂತ್ರಗಾರಿಕೆಯನ್ನು ನಡೆಸುತ್ತಿವೆ. ಇವುಗಳನ್ನು ಎದುರಿಸುವ ಚಳವಳಿಗಳು ದೇಶದಲ್ಲಿ ದುರ್ಬಲಗೊಂಡಿವೆ. ದೇಶದಲ್ಲಿ ನಿರುದ್ಯೋಗ , ಜಾತೀಯತೆ, ಸರಕಾರದ ತಪ್ಪು ನೀತಿಗಳಿಂದಾದ ಹಲವು ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯುವ ಬದಲು ಇತರ ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಯುದ್ಧದ ಬಗ್ಗೆ ಚರ್ಚೆ ನಡೆಯುತ್ತಿದೆ. ಎರಡು ದೇಶಗಳ ನಡುವೆ ಯುದ್ಧ ನಡೆದರೆ ಜಗತ್ತಿಗೆ ಶೇ 50ರಷ್ಟು ಯುದ್ಧ ಸಾಮಗ್ರಿಗಳನ್ನು ಸರಬರಾಜು ಮಾಡುವ ಅಮೆರಿಕಾ ಇದರ ಹೆಚ್ಚಿನ ಲಾಭ ಪಡೆಯಲಿದೆ. ದೇಶದಲ್ಲಿ ಬಡತನ, ನಿರುದ್ಯೋಗ ಸೇರಿದಂತೆ ಹಲವು ಸಮಸ್ಯೆಗಳಲ್ಲಿ ಸಿಲುಕಿರುವ ಜನರು ಅವುಗಳಿಂದ ಹೊರಬರಲು ಸಮಸ್ಯೆಗಳ ಜೊತೆ ನಿತ್ಯ ಹೋರಾಡುತ್ತಿದ್ದಾರೆ ಎಂದು ಪಟುವರ್ಧನ್ ತಿಳಿಸಿದ್ದಾರೆ.