×
Ad

ಪಲ್ಸ್ ಪೋಲಿಯೊ ಲಸಿಕೆ: ದ.ಕ. ಜಿಲ್ಲೆಯಲ್ಲಿ ಶೇ. 92 ಸಾಧನೆ

Update: 2019-03-10 22:31 IST

ಮಂಗಳೂರು, ಮಾ.10: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಒಟ್ಟು 922 ಬೂತ್‌ಗಳಲ್ಲಿ ರವಿವಾರ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮ ನಡೆದಿದೆ. 5 ವರ್ಷದೊಳಗಿನ ಒಟ್ಟು 1,49,562 ಮಕ್ಕಳಿಗೆ ಲಸಿಕೆ ಹಾಕುವ ಗುರಿಯಲ್ಲಿ 1,31,308 ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಶೇ. 92.62ರಷ್ಟು ಸಾಧನೆ ಮಾಡಲಾಗಿದೆ.

ಲಸಿಕೆ ಹಾಕಲು ಮಂಗಳೂರಿನ 68,521, ಬಂಟ್ವಾಳದಲ್ಲಿ 30,763 ಮಕ್ಕಳು, ಬೆಳ್ತಂಗಡಿಯಲ್ಲಿ 19,965, ಪುತ್ತೂರಿನಲ್ಲಿ 20,836, ಸುಳ್ಯದಲ್ಲಿ 9477 ಮಕ್ಕಳನ್ನು (5 ವರ್ಷದೊಳಗಿನ) ಗುರುತಿಸಲಾಗಿತ್ತು. ಅದರಲ್ಲಿ ಮಂಗಳೂರಿನಲ್ಲಿ 55,394 ಮಕ್ಕಳು, ಬಂಟ್ವಾಳದಲ್ಲಿ 28,155, ಬೆಳ್ತಂಗಡಿಯಲ್ಲಿ 19,597, ಪುತ್ತೂರಿನಲ್ಲಿ 19,553, ಸುಳ್ಯದಲ್ಲಿ 8,609 ಮಕ್ಕಳಿಗೆ ಲಸಿಕೆಯನ್ನು ಹಾಕಲಾಗಿದೆ. ಬೂತ್‌ಗಳಲ್ಲಿ ಮಾತ್ರವಲ್ಲದೆ, 7 ಮೊಬೈಲ್ ಬೂತ್‌ಗಳು, 26 ಟ್ರಾನ್ಸಿಟ್ ತಂಡಗಳನ್ನು ನಿಯೋಜಿಸಿ ಲಸಿಕೆ ಹಾಕಲಾಗಿದೆ.

ಮನೆಮನೆ ಭೇಟಿ: ಮಾ.11, 12ರಂದು ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಮಾ.11ರಿಂದ 13ರವರೆಗೆ ನಗರ ಪ್ರದೇಶಗಳಲ್ಲಿ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಲಸಿಕೆಯಿಂದ ದೂರ ಉಳಿದ ಮಕ್ಕಳಿಗೆ ಲಸಿಕೆ ಹಾಕಲಿದ್ದಾರೆ.

ಚಾಲನೆ: ನಗರದ ಲೇಡಿಗೋಶನ್ ಆಸ್ಪತ್ರೆಯಲ್ಲಿ ಜಿಲ್ಲಾ ಮಟ್ಟದ ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಸಚಿವ ಯು.ಟಿ. ಖಾದರ್ ರವಿವಾರ ಬೆಳಗ್ಗೆ ಚಾಲನೆ ನೀಡಿದರು. ಬಳಿಕ ಸಂಸದ ನಳಿನ್ ಕುಮಾರ್ ಜತೆಗೂಡಿ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಿದರು.

ಈ ಸಂದರ್ಭ ಮಾತನಾಡಿದ ಯು.ಟಿ. ಖಾದರ್, ದ.ಕ. ಜಿಲ್ಲೆ 1999ರಲ್ಲೇ ಪೋಲಿಯೊ ಮುಕ್ತವಾಗಿದ್ದರೆ, 2007ರಲ್ಲಿ ರಾಜ್ಯವೂ ಪೋಲಿಯೊ ಮುಕ್ತವಾಗಿದೆ. 2014ರಲ್ಲಿ ಇಡೀ ದೇಶವೇ ಪೋಲಿಯೊ ಮುಕ್ತವಾಗಿದ್ದಾಗಿ ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ. ಆದರೂ ರೋಗದ ನಿಟ್ಟಿನಲ್ಲಿ ಜಾಗ್ರತೆ ವಹಿಸಬೇಕಾಗಿದೆ, ಮಕ್ಕಳ ಪೋಷಕರೂ ನಿರ್ಲಕ್ಷ ಮಾಡದೆ ಪೋಲಿಯೊ ಲಸಿಕೆ ಹಾಕಬೇಕು ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಜಿಲ್ಲಾ ಆರೋಗ್ಯಾಧಿಕಾರಿ ರಾಮಕೃಷ್ಣ ರಾವ್, ಆರ್‌ಸಿಎಚ್ ಅಧಿಕಾರಿ ಡಾ.ರಾಜೇಶ್ ಬಿ.ವಿ., ಲೇಡಿಗೋಶನ್ ಆಸ್ಪತ್ರೆ ಅಧೀಕ್ಷಕಿ ಡಾ.ಸವಿತಾ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News