ಹೆಮ್ಮಾಡಿ ಒಂಟಿ ಮಹಿಳೆ ಕೊಲೆ ಪ್ರಕರಣ: ಆರೋಪಿ ಬಂಧನ

Update: 2019-03-11 16:44 GMT

ಕುಂದಾಪುರ, ಮಾ.11: ಹೆಮ್ಮಾಡಿ ಸಮೀಪದ ಹರೆಗೋಡು ಸುಳ್ಸೆ ಒಂಟಿ ಮಹಿಳೆಯ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ಕುಂದಾ ಪುರ ಪೊಲೀಸರು, ಈ ಸಂಬಂಧ ಓರ್ವನನ್ನು ಬಂಧಿಸಿದ್ದಾರೆ.

ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ ಚಂದ್ರ ಸೋಮವಾರ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಿದರು.

ಬಂಧಿತನನ್ನು ಕುಂದಾಪುರ ಜಡ್ಕಲ್ ಗ್ರಾಮದ ಸುಳ್ಕೋಡು ನಿವಾಸಿ ರವಿರಾಜ್ (31) ಎಂದು ಗುರುತಿಸಲಾಗಿದೆ.

ಈತನನ್ನು ಮಾ.11 ರಂದು ಬೆಳಗ್ಗೆ 7.45ರ ಸುಮಾರಿಗೆ ಸಿದ್ಧಾಪುರ ಪೆಟ್ರೋಲ್ ಬಂಕ್ ಬಳಿ ಬಂಧಿಸಿ, ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಮನೆಯಲ್ಲಿ ಒಂಟಿಯಾಗಿದ್ದ ಗುಲಾಬಿ ಮಾ.1ರಂದು ಬೆಳಗ್ಗೆ ಅನುಮಾಸ್ಪದವಾಗಿ ಮೃತಪಟ್ಟಿದ್ದು, ಅವರ ಮೈ ಮೇಲೆ ಇದ್ದ 2. 70 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು ಕಳವು ಆಗಿರುವುದು ಕಂಡುಬಂದಿತ್ತು. ಬಳಿಕ ನಡೆದ ಮರಣೋತ್ತರ ಪರೀಕ್ಷೆಯಲ್ಲಿ ಗುಲಾಬಿ ಅವರನ್ನು ಕೊಲೆ ಮಾಡಿರುವುದು ದೃಢಪಟ್ಟಿತ್ತು.

ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಗಾಗಿ ಎಸ್ಪಿ ನಿಶಾ ಜೇಮ್ಸ್ ಹಾಗೂ ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಮಾರ್ಗದರ್ಶನದಲ್ಲಿ ಕುಂದಾಪುರ ಡಿವೈಎಸ್ಪಿ ಬಿ.ಪಿ.ದಿನೇಶ್ ಕುಮಾರ್, ಕುಂದಾಪುರ ವೃತ್ತ ನಿರೀಕ್ಷಕ ಮಂಜಪ್ಪ ಡಿ.ಆರ್. ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ತನಿಖೆ ನಡೆಸಿದ ತಂಡವು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು.

ಚಿನ್ನಾಭರಣಕ್ಕಾಗಿ ಕೊಲೆ

ರವಿರಾಜ್ ಪತ್ನಿ ಗುಲಾಬಿ ಮನೆಯ ಸಮೀಪದಲ್ಲೇ ಇರುವ ಗೇರುಬೀಜ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಫ್ಯಾಕ್ಟರಿಯವರು ನೀಡಿದ ವಸತಿಗೃಹದಲ್ಲಿ ರವಿರಾಜ್ ಪತ್ನಿ ಜೊತೆ ವಾಸವಾಗಿದ್ದನು. ಹೀಗೆ 2008ರಿಂದ ರವಿರಾಜ್‌ಗೆ ಗುಲಾಬಿ ಅವರ ಪರಿಚಯ ಇತ್ತೆನ್ನಲಾಗಿದೆ. ಅಲ್ಲದೆ ಗುಲಾಬಿ ಹಾಗೂ ರವಿರಾಜ್ ಮಧ್ಯೆ ಹಣಕಾಸಿನ ವ್ಯವಹಾರ ಕೂಡ ನಡೆಯುತ್ತಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.

ಕೆಲಸ ಇಲ್ಲದೆ ತಿರುಗಾಡುತ್ತಿದ್ದ ರವಿರಾಜ್ ಹಣಕಾಸಿನ ಸಮಸ್ಯೆಗೆ ಒಳಗಾಗಿದ್ದನು. ಈ ಹಿನ್ನೆಲೆಯಲ್ಲಿ ರವಿರಾಜ್ ಫೆ. 28ರಂದು ಮಧ್ಯರಾತ್ರಿ ಗುಲಾಬಿ ಅವರ ಮನೆಗೆ ಹೋಗಿದ್ದು, ಗುಲಾಬಿ ಅವರಲ್ಲಿ ಅಡವಿರಿಸಲು ಚಿನ್ನಾಭರಣ ನೀಡುವಂತೆ ಕೇಳಿದ್ದನು. ಇದನ್ನು ನೀಡಲು ಒಪ್ಪದ ಗುಲಾಬಿಯ ಕುತ್ತಿಗೆಗೆ ತನ್ನ ಕೈಯಲ್ಲಿದ್ದ ಟವಲ್ ಹಾಕಿ ಬಿಗಿದು ಉಸಿರು ಕಟ್ಟಿಸಿ ಕೊಲೆ ಮಾಡಿದ್ದನು. ಬಳಿಕ ಕುತ್ತಿಗೆಯಲ್ಲಿದ್ದ ಚಿನ್ನದ ಸರ, ಚಿನ್ನದ ಕಿವಿಯ ಓಲೆ ಹಾಗೂ ಉಂಗುರವನ್ನು ಕಳವು ಮಾಡಿ, ನಂತರ ಅವುಗಳನ್ನು ಬೆಂಗಳೂರು ಹಾಗೂ ಕುಂದಾಪುರದಲ್ಲಿ ಅಡವಿರಿಸಿಕೊಂಡಿದ್ದ ಎಂದು ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ.

ಈ ತಂಡದಲ್ಲಿ ಕುಂದಾಪುರ ಗ್ರಾಮಾಂತ ಠಾಣಾಧಿಕಾರಿ ಶ್ರೀಧರ್ ನಾಯ್ಕಾ, ಕುಂದಾಪುರ ಠಾಣಾಧಿಕಾರಿ ಹರೀಶ್, ಸಿಬ್ಬಂದಿಗಳಾದ ವೆಂಕಟರಮಣ ದೇವಾಡಿಗ, ಮಂಜುನಾಥ್, ಮೋಹನ್ ಶಿರೂರು, ಸಂತೋಷ್, ಮಧು, ಸಂತೋಷ್ ಕುಮಾರ್, ರತ್ನಾಕರ್ ಶೆಟ್ಟಿ, ಸಂತೋಷ್ ಕೊರವಾಡಿ, ಸುಜಿತ್, ಆದರ್ಶ್, ಚಂದ್ರಶೇಖರ್, ಶ್ರೀಧರ, ವಿಜಯ ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿ ಶಿವಾನಂದ ಸಹಕರಿಸಿದ್ದು.

ರವಿರಾಜ್ ಪತ್ನಿಗೆ ಆಕ್ರೋಶಿತರಿಂದ ಹಲ್ಲೆ

ಬಂಧಿತ ಆರೋಪಿ ರವಿರಾಜ್‌ನನ್ನು ಇಂದು ಮಧ್ಯಾಹ್ನ ವೇಳೆ ಪೊಲೀಸರು ಮಹಜರು ನಡೆಸಲು ಮೃತ ಗುಲಾಬಿ ಅವರ ಮನೆಗೆ ಕರೆತಂದಿದ್ದರು. ಈ ಸಂದರ್ಭದಲ್ಲಿ ಅಲ್ಲೇ ಸಮೀಪದ ವಸತಿಗೃಹದಲ್ಲಿದ್ದ ರವಿರಾಜ್ ಪತ್ನಿ ಕೂಡ ಅಲ್ಲಿಗೆ ಬಂದಿದ್ದರು. ತನ್ನ ಪತಿ ಈ ಕೃತ್ಯದಲ್ಲಿ ಭಾಗಿಯಾಗಿರುವುದು ತಿಳಿಯದ ಪತ್ನಿ, ವಿಷಯ ತಿಳಿದು ವಿಚಾರಿಸಲು ಬಂದಿದ್ದರೆನ್ನಲಾಗಿದೆ. ಈ ವೇಳೆ ಆಕ್ರೋಶ ಗೊಂಡ ಗುಲಾಬಿ ಅವರ ಕುಟುಂಬದ ಮಹಿಳೆಯರು ರವಿರಾಜ್ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾರೆ. ಕೂಡಲೇ ಮಧ್ಯಪ್ರವೇಶಿಸಿದ ಪೊಲೀಸರು, ಆಕೆಯನ್ನು ಅಲ್ಲಿಂದ ಕಳುಹಿಸಿಕೊಟ್ಟರು ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News