ಎಸ್‌ಎಫ್‌ಐ ಮುಖಂಡನ ಮೇಲೆ ಹಲ್ಲೆ: ಇಬ್ಬರು ಬಿಜೆಪಿ ಕಾರ್ಯಕರ್ತರ ಬಂಧನ

Update: 2019-03-11 16:45 GMT

ತಿರುವನಂತಪುರಂ, ಮಾ.11: ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ(ಎಸ್‌ಎಫ್‌ಐ) ಮುಖಂಡನ ಮೇಲೆ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿರುವುದಾಗಿ ದೂರು ದಾಖಲಾಗಿದ್ದು, ಈ ಸಂಬಂಧ ಇಬ್ಬರು ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಜಿಲ್ಲೆಯ ಪರಸ್ಸಲ ಎಂಬಲ್ಲಿ ಎಸ್‌ಎಫ್‌ಐ ಜಿಲ್ಲಾ ಸಮಿತಿ ಸದಸ್ಯ ಅಬು ತಾಹಿರ್ ಮೇಲೆ ಹಲ್ಲೆ ನಡೆಸಲಾಗಿದ್ದು ತಾಹಿರ್ ತಲೆಗೆ ಗಂಭೀರ ಗಾಯವಾಗಿದೆ ಎಂದು ವರದಿಯಾಗಿದೆ. ಬಳಿಕ ತಿರುವನಂತಪುರಂನ ಗಡಿ ಭಾಗದಲ್ಲಿರುವ ಪರಸ್ಸಲದಲ್ಲಿ ಹಿಂಸಾಚಾರ ಭುಗಿಲೆದ್ದಿದೆ.

ಸಿಪಿಐ(ಎಂ) ಹಾಗೂ ಬಿಜೆಪಿ ಮುಖಂಡರ ಮನೆ ಹಾಗೂ ವಾಹನಗಳ ಮೇಲೆ ಆಕ್ರಮಣ ನಡೆಸುವ ಕೃತ್ಯ ಮುಂದುವರಿದೆ. ಹಿಂಸಾಚಾರದಲ್ಲಿ ಎಸ್‌ಎಫ್‌ಐ ಮುಖಂಡ ಅಬು ತಾಹಿರ್ ಸೇರಿದಂತೆ ಆಡಳಿತಾರೂಢ ಸಿಪಿಐ(ಎಂ) ಪಕ್ಷದ ನಾಲ್ವರು ಕಾರ್ಯಕರ್ತರು ಹಾಗೂ ಮೂವರು ಬಿಜೆಪಿ ಕಾರ್ಯಕರ್ತರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಹಿರ್ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿ ಬಿಜೆಪಿ ಕಾರ್ಯಕರ್ತರಾದ ಸಂತೋಷ್ ಕುಮಾರ್ ಹಾಗೂ ಗಿರಿ ಕುಮಾರ್ ಎಂಬವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News