ಮೂಡುಸಗ್ರಿ: ಅತ್ಯಾಚಾರ ಎಸಗಿ ಬಾಲಕಿ ಕೊಲೆ; ಮುಂದುವರಿದ ತನಿಖೆ

Update: 2019-03-11 16:48 GMT

ಮಣಿಪಾಲ, ಮಾ.11: ಮೂಡುಸಗ್ರಿ ರೈಲ್ವೆ ಹಳಿಯ ಸಮೀಪದ ಹಾಡಿ ಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ದುಷ್ಕರ್ಮಿಗಳು ಅತ್ಯಾಚಾರ ಎಸಗಿ ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಉಡುಪಿಯಲ್ಲಿ ವಾಸವಾಗಿರುವ ಬಾದಾಮಿ ಮೂಲದ ವಲಸೆ ಕಾರ್ಮಿಕರೊಬ್ಬರ 17ರ ಹರೆಯದ ಮಗಳಾದ ಮೃತ ಬಾಲಕಿಯನ್ನು ದುಷ್ಕರ್ಮಿಗಳು ಹಾಡಿಗೆ ಕರೆದೊಯ್ದು ಕುತ್ತಿಗೆಯನ್ನು ಶಾಲಿನಿಂದ ಬಿಗಿದು ಕೊಲೆ ಮಾಡಿರುವ ಬಗ್ಗೆ ತನಿಖೆಯಿಂದ ತಿಳಿದುಬಂದಿದೆ. ಇದೇ ವೇಳೆ ಆಕೆಯ ಮೇಲೆ ಅತ್ಯಾಚಾರ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದರೂ ಮಣಿಪಾಲದ ವಿಧಿ ವಿಜ್ಞಾನ ತಜ್ಞರ ವರದಿ ಬಂದ ಬಳಿಕವಷ್ಟೆ ದೃಢಪಡಬೇಕಾಗಿದೆ.

ಆ ವರದಿಯಲ್ಲಿ ಅತ್ಯಾಚಾರ ಎಸಗಿರುವುದು ಸಾಬೀತಾದರೆ, ಅದರ ಆಧಾರದಲ್ಲಿ ಪೊಲೀಸರು, ಮೃತ ಬಾಲಕಿ ಅಪ್ರಾಪ್ತೆಯಾಗಿರುವುದರಿಂದ ಪೊಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಲಿದ್ದಾರೆ. ಸದ್ಯಕ್ಕೆ ಈ ಬಗ್ಗೆ ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೂಡುಸಗ್ರಿಯ ಪದ್ಮನಾಭ ಮೂಲ್ಯ ಎಂಬವರ ಪತ್ನಿ ಮಾ.10ರಂದು ಸಂಜೆ 5ಗಂಟೆ ಸುಮಾರಿಗೆ ಮನೆ ಸಮೀಪದ ಹಾಡಿಗೆ ಸೌದೆ ತರಲು ಹೋದಾಗ ಬಾಲಕಿಯ ಮೃತದೇಹವು ಕೊಲೆ ಮಾಡಿರುವ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಉಬ್ಬಿಕೊಂಡಿದ್ದ ಪರಿಣಾಮ ಮೃತದೇಹವು 25-30 ವರ್ಷ ಪ್ರಾಯದ ಮಹಿಳೆ ಯದಂತೆ ಕಂಡುಬರುತ್ತಿತ್ತು. ಬಳಿಕ ಪೊಲೀಸರು ಪೋಷಕರನ್ನು ಸ್ಥಳಕ್ಕೆ ಕರೆಸಿದ್ದು, ಅವರು ಬಾಲಕಿಯ ಗುರುತು ಪತ್ತೆ ಹಚ್ಚಿದ್ದಾರೆ ಎನ್ನಲಾಗಿದೆ.

ಉಡುಪಿಯ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಈಕೆ ಮಾ. 9ರಂದು ಮಧ್ಯಾಹ್ನ ವೇಳೆ ಅಂಗಡಿಯಿಂದ ಮನೆಗೆ ಹೊರಟಳು ನಾಪತ್ತೆಯಾಗಿದ್ದಳು. ಈ ಬಗ್ಗೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಣಿಪಾಲ ಶವಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.

ಬಾಲಕಿ ಮೃತದೇಹ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಸದ್ಯ ಕೊಲೆ ಪ್ರಕರಣ ದಾಖಲಾಗಿದ್ದು, ಆಕೆಯ ಮೇಲೆ ಅತ್ಯಾಚಾರ ನಡೆದಿರುವ ಬಗ್ಗೆ ವಿಧಿ ವಿಜ್ಞಾನ ತಜ್ಞರು ಲಿಖಿತ ವರದಿ ನೀಡಿದ ಬಳಿಕ ಪೊಕ್ಸೋ ಪ್ರಕರಣ ದಾಖಲಿಸಲಾ ಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ನಿಶಾ ಜೇಮ್ಸ್ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ತನಿಖೆಯನ್ನು ಚುರುಕುಗೊಳಿಸಲಾಗಿದ್ದು, ಈ ಸಂಬಂಧ ಪ್ರಕರಣದ ತನಿಖಾಧಿಕಾರಿಯಾಗಿರುವ ಮಣಿಪಾಲ ಠಾಣಾ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ್, ಡಿಸಿಐಬಿ ಪೊಲೀಸ್ ನಿರೀಕ್ಷಕ ಕಿರಣ್, ಮಹಿಳಾ ಠಾಣಾ ಪೊಲೀಸ್ ನಿರೀಕ್ಷಕ ಸಂಪತ್ ಕುಮಾರ್ ಹಾಗೂ ಸೆನ್ ಅಪರಾಧ ಠಾಣೆಯ ಪೊಲೀಸ್ ನಿರೀಕ್ಷಕ ಸೀತಾರಾಮ್ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಯಾರನ್ನು ಕೂ ಬಂಧಿಸಿಲ್ಲ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News