×
Ad

ದೇಶ ವಿಭಜನೆಯ ಸಂದರ್ಭ ದೂರವಾದ ಸಹೋದರರು 72 ವರ್ಷಗಳ ಬಳಿಕ ಒಂದಾದರು!

Update: 2019-03-11 23:01 IST

ಹೊಸದಿಲ್ಲಿ, ಮಾ.11: ದೇಶ ವಿಭಜನೆಯ ಸಂದರ್ಭ ಪ್ರತ್ಯೇಕಗೊಂಡಿದ್ದ ಬಂಧುಗಳು 72 ವರ್ಷದ ಬಳಿಕ ಮತ್ತೆ ಪರಸ್ಪರರನ್ನು ಭೇಟಿಯಾದ ಘಟನೆ ನಡೆದಿದೆ.

    ಏಕೀಕೃತ ಭಾರತದ ಗುಜ್ರನ್‌ವಾಲಾ ಪ್ರದೇಶದ ಘಡಿಯಾ ಕಲಾನ್ ಗ್ರಾಮದ ನಿವಾಸಿಯಾಗಿದ್ದ ಆ ಕುಟುಂಬಕ್ಕೆ ದೇಶ ವಿಭಜನೆಯ ಸುದ್ದಿ ಬರಸಿಡಿಲಿನಂತೆ ಬಂದೆರಗಿತ್ತು. ಅದೊಂದು ದಿನ ರಾತ್ರಿ ತನ್ನನ್ನು ನಿದ್ದೆಯಿಂದ ಎಬ್ಬಿಸಿದ ಮನೆಯವರು , ತಕ್ಷಣ ಈ ಸ್ಥಳವನ್ನು ಬಿಟ್ಟು ತೆರಳುವ ಸಮಯ ಬಂದಿದೆ ಎಂದು ತಿಳಿಸಿದರು ಎಂದು ಇದೀಗ 76 ವರ್ಷವಾಗಿರುವ ಅಮೀರ್ ಸಿಂಗ್ ಸ್ಮರಿಸಿಕೊಳ್ಳುತ್ತಾರೆ.

 ಅಮೀರ್ ಸಿಂಗ್ ಆಗ 4 ವರ್ಷದ ಬಾಲಕ. ತಕ್ಷಣ ಕೈಗೆ ಸಿಕ್ಕ ಸಾಮಾನುಗಳನ್ನು ಗಂಟುಮೂಟೆ ಕಟ್ಟಿಕೊಂಡು ಮನೆಯ ಹೊರಗಡೆ ಒಟ್ಟು ಸೇರಿದೆವು. ಆಗ ನಡುರಾತ್ರಿಯಾಗಿತ್ತು ಮತ್ತು ಧಾರಾಕಾರ ಮಳೆ ಸುರಿಯುತ್ತಿತ್ತು. ನಮ್ಮ ಸುತ್ತ ಮುತ್ತ ಎಲ್ಲೆಡೆ ನೀರು ತುಂಬಿತ್ತು. ಎಲ್ಲೆಡೆ ಗೊಂದಲ ಗಡಿಬಿಡಿ. ಈ ಸಂದರ್ಭ ಅವರು ಸಾಗುತ್ತಿದ್ದ ಕುದುರೆ ಕಾಲುಜಾರಿ ಬಿದ್ದಾಗ ಅಮೀರ್ ಮತ್ತವನ ತಾಯಿ ಕೆಳಗೆ ಬಿದ್ದರು. ಕಡೆಗೂ ನೆರೆಮನೆಯವರ ಸಹಾಯದಿಂದ ಆ ಇಕ್ಕಟ್ಟಿನಿಂದ ಅವರು ಪಾರಾಗಿ ಮುನ್ನಡೆದು ಸುರಕ್ಷಿತವಾಗಿ ಹರ್ಯಾನದ ಪಾಣಿಪತ್ ನಗರವನ್ನು ಸೇರಿಕೊಂಡರು. ಈ ಧಾವಂತದಲ್ಲಿ ಆಗ 10 ವರ್ಷದವನಾಗಿದ್ದ ಅಮೀರ್‌ನ ಸಹೋದರ ಸಂಬಂಧಿ ದಲ್ಬೀರ್ ಸಿಂಗ್ ಅವರು ನಾಪತ್ತೆಯಾಗಿ ಹೋಗಿದ್ದರು.

ಈ ಮಧ್ಯೆ, ಕಷ್ಟಪಟ್ಟು, ದಂಗೆಕೋರರಿಂದ ತಪ್ಪಿಸಿಕೊಳ್ಳುತ್ತಾ ದಲ್ಬೀರ್ ಸಿಂಗ್ ಅವರೂ ಭಾರತಕ್ಕೆ ಬಂದಿದ್ದು ಹರ್ಯಾಣದ ಕರ್ನಾಲ್ ಜಿಲ್ಲೆಗೆ ಬಂದು ಸೇರಿದ್ದರು. ಈ ಎರಡೂ ಜಿಲ್ಲೆಗಳು ಅಕ್ಕಪಕ್ಕದಲ್ಲಿದ್ದರೂ ಮತ್ತೊಬ್ಬರು ಎಲ್ಲಿದ್ದಾರೆ ಎಂಬ ಯಾವ ಸುಳಿವೂ ಇಲ್ಲದೆ ಎರಡು ಕುಟುಂಬದವರೂ ಬಹುತೇಕ ಮರೆತೇ ಬಿಟ್ಟಿದ್ದರು. ಕೆಲ ದಿನಗಳ ಬಳಿಕ ಕರ್ನಾಲ್‌ನಿಂದ ಸಂಗ್ರೂರ್‌ಗೆ ಬಂದ ದಲ್ಬೀರ್ ಭಾರತೀಯ ಸೇನಾಪಡೆಯನ್ನು ಸೇರಿಕೊಂಡಿದ್ದರು. ನಿವೃತ್ತರಾದ ಬಳಿಕ ನೋಯ್ಡಾದಲ್ಲಿ ವೈದ್ಯಕೀಯ ಕ್ಲಿನಿಕ್ ಒಂದನ್ನು ಆರಂಭಿಸಿದ್ದರು. ಈ ಮಧ್ಯೆ ಅಮೀರ್, ಉತ್ತರಾಖಂಡದ ಉಧಾಮ್ ಸಿಂಗ್ ನಗರಕ್ಕೆ ಸ್ಥಳಾಂತರಗೊಂಡು ಅಲ್ಲಿ ಓರ್ವ ಕೃಷಿಕನಾಗಿ ಕಾಯಕ ಮುಂದುವರಿಸಿದ್ದರು. 1960ರ ಸುಮಾರಿಗೆ ದೇಶ ವಿಭಜನೆಯ ಸಂದರ್ಭ ಬೇರ್ಪಟ್ಟ ಕುಟುಂಬ ಸದಸ್ಯರ ಹುಡುಕಾಟಕ್ಕೆ ಅಮೀರ್ ಮುಂದಾದರು. ಆಗ ಕೆಲವರು ದಲ್ಬೀರ್ ಸಿಂಗ್ ಸಂಗ್ರೂರ್‌ನಲ್ಲಿ ಇರುವುದಾಗಿ ಮಾಹಿತಿ ನೀಡಿದರು.

“ಅಂದಿನಿಂದ ಅವರನ್ನು ಹುಡುಕಾಡುವುದೇ ಅಮೀರ್ ರ ಪ್ರಮುಖ ಕಾರ್ಯವಾಗಿತ್ತು. ಮುಂದಿನ ಕೆಲ ವರ್ಷ ದಲ್ಬೀರ್ ಬಗ್ಗೆ ಮಾಹಿತಿ ಸಂಗ್ರಹಿಸುವುದರಲ್ಲಿ ತೊಡಗಿದರು ಅಮೀರ್ ಸಿಂಗ್. 2014ರಲ್ಲಿ ಪಾಕಿಸ್ತಾನಕ್ಕೆ ತೆರಳಿದ ಅಮೀರ್ ಸಿಂಗ್, ದೇಶ ವಿಭಜನೆಗೂ ಮೊದಲು ತಾವು ಹೊಂದಿದ್ದ ಜಮೀನಿನ ದಾಖಲೆ ಪತ್ರ ಸಂಗ್ರಹಿಸಿದಾಗ ಅದರಲ್ಲಿ ದಲ್ಬೀರ್ ಹೆಸರೂ ಕೂಡಾ ಇರುವುದನ್ನು ಖಾತರಿ ಪಡಿಸಿಕೊಂಡರು. 2018ರಲ್ಲಿ ‘1947ರ ವಿಭಜನೆ ದಾಖಲೆ’ ತಂಡವು ಅವರನ್ನು ಸಂದರ್ಶಿಸಲು ಬಯಸಿದಾಗ, ಅಮೀರ್ ಆ ತಂಡಕ್ಕೆ ವೀಡಿಯೊ ಕಾನ್ಫರೆನ್ಸ್ ಮೂಲಕ ಸಂದರ್ಶನ ನೀಡಿ ತನ್ನ ಕುಟುಂಬದವರ ಮಾಹಿತಿ ನೀಡಿದರು.

ಅಮೀರ್ ಸಿಂಗ್ ಅವರ 72 ವರ್ಷದ ಕಾಯುವಿಕೆ ಕಡೆಗೂ ಸುಖಾಂತ್ಯಗೊಳ್ಳುವ ಸಂದರ್ಭ ಕಳೆದ ತಿಂಗಳು ಬಂದೊದಗಿತು. ಓರ್ವ ಸಂಬಂಧಿ ದಲ್ಬೀರ್ ಸಿಂಗ್‌ರ ಫೋನ್ ನಂಬರ್ ಪಡೆಯುವಲ್ಲಿ ಸಫಲರಾದರು. ಸುಮಾರು 72 ವರ್ಷದ ಬಳಿಕ ಇಬ್ಬರು ಸಹೋದರರೂ ಮತ್ತೆ ಒಂದಾಗುವ ಮೊದಲಿನ ಆ ಕೆಲವು ನಿಮಿಷಗಳು ತನ್ನ ಜೀವನದ ಅತ್ಯಂತ ದೀರ್ಘಾವಧಿಯ ಸಮಯವಾಗಿತ್ತು ಎನ್ನುತ್ತಾರೆ ಅಮೀರ್ ಸಿಂಗ್.

ಕಡೆಗೂ ಕೇಂದ್ರ ದಿಲ್ಲಿಯ ರಖಾಬ್ ಗಂಜ್ ಗುರುದ್ವಾರದಲ್ಲಿ ಪರಸ್ಪರರನ್ನು ಭೇಟಿಯಾದ ಸಹೋದರರು ಅಪ್ಪಿಕೊಂಡು ಆನಂದ ಭಾಷ್ಪ ಸುರಿಸಿದಾಗ ಕುಟುಂಬ ಸದಸ್ಯರ ಹರ್ಷೋದ್ಘಾರ ‘ಜೋ ಬೋಲೆ ಸೊ ನಿಹಾಲ್’ ಎಂಬ ಘೋಷಣೆಯೊಂದಿಗೆ ಮುಗಿಲು ಮುಟ್ಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News