ಗುಜರಾತ್: ಕಾಂಗ್ರೆಸ್ ಶಾಸಕ ಧಾರಾವಿಯಾ ರಾಜೀನಾಮೆ
ಅಹ್ಮದಾಬಾದ್,ಮಾ.11: ಗುಜರಾತ್‌ನ ಜಾಮ್‌ನಗರ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಶಾಸಕ ವಲ್ಲಭ್ ಧಾರಾವಿಯಾ ಪಕ್ಷವನ್ನು ತ್ಯಜಿಸಿದ್ದಾರೆ ಹಾಗೂ ವಿಧಾನಸಭಾ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಹ್ಮದಾಬಾದ್‌ನಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆ ಮಂಗಳವಾರ ನಡೆಯಲಿರುದ್ದು, ಮುನ್ನಾ ದಿನವಾದ ಸೋಮವಾರ ಧಾರಾವಿಯಾ ಪಕ್ಷ ತ್ಯಜಿಸಿರುವುದು ಕಾಂಗ್ರೆಸ್‌ಗೆ ಆಘಾತವನ್ನುಂಟು ಮಾಡಿದೆ.
ಅವರು ತಮ್ಮ ರಾಜೀನಾಮೆ ಪತ್ರವನ್ನು ಇಂದು ಮಧ್ಯಾಹ್ನ ವಿಧಾನಸಭಾ ಸ್ಪೀಕರ್ ರಾಜೇಂದ್ರ ತ್ರಿವೇದಿ ಅವರಿಗೆ ಸಲ್ಲಿಸಿರುವುದಾಗಿ ತಿಳಿದುಬಂದಿದೆ. ಕಳೆದ ನಾಲ್ಕು ದಿನಗಳಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾಂಗ್ರೆಸ್‌ನ ನಾಲ್ಕನೆ ಶಾಸಕರಾಗಿದ್ದಾರೆ. ‘‘ಧಾರಾವಿಯಾ ಅವರು ಜಾಮ್‌ನಗರ್ (ಗ್ರಾಮಾಂತರ) ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತಾನು ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡಿರುವುದಾ ಅವರು ತಿಳಿಸಿದ್ದಾರೆ’’ ಎಂದು ಸ್ಪೀಕರ್ ತ್ರಿವೇದಿ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ದ್ರಂಗಾಧ್ರ ಕ್ಷೇತ್ರದ ಶಾಸಕ ಪರ್ಸೋತ್ತಮ್ ಸಬಾರಿಯಾ ಅವರು ಮಾರ್ಚ್ 8ರಂದು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿಗೆ ಸೇರ್ಪಡೆಗೊಂಡಿದ್ದರು.
ನೀರಾವರಿ ಹಗರಣಕ್ಕೆ ಸಂಬಂಧಿಸಿ ಸಬಾರಿಯ ಅವರನ್ನು ಕಳೆದ ವರ್ಷ ಬಂಧಿಸಲಾಗಿತ್ತು ಹಾಗೂ ಫೆಬ್ರವರಿಯಲ್ಲಿ ಅವರಿಗೆ ಗುಜರಾತ್ ಹೈಕೋರ್ಟ್ ಜಾಮೀನು ಬಿಡುಗಡೆ ನೀಡಿತ್ತು. ತಾನು ಯಾವುದೇ ಒತ್ತಡಕ್ಕೊಳಗಾಗಿ ಬಿಜೆಪಿಗೆ ಸೇರ್ಪಡೆಗೊಂಡಿಲ್ಲವೆಂದು ಹೇಳಿಕೊಂಡಿದ್ದ ಸಬಾರಿಯಾ ಅವರು, ತನ್ನ ಕ್ಷೇತ್ರದ ಅಭಿವೃದ್ಧಿಗಾಗಿ ಪಕ್ಷ ಬದಲಾಯಿಸಿರುವುದಾಗಿ ಹೇಳಿದರು. ಮಾನ್ವದಾರ್ ಕ್ಷೇತ್ರದ ಇನ್ನೋರ್ವ ಕಾಂಗ್ರೆಸ್ ಶಾಸಕ ಜವಾಹರ್ ಚಾವ್ಡಾ ಮಾರ್ಚ್ 8ರಂದು ವಿಧಾನಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿಗೆ ಸೇರ್ಪಡೆಯಾಗಿದ್ದರು. ವಿಜಯ್‌ರೂಪಾನಿ ನೇತೃತ್ವದ ಬಿಜೆಪಿ ಸರಕಾರವು ಅವರನ್ನು ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಸಂಪುಟಕ್ಕೆ ಸೇರ್ಪಡೆಗೊಳಿಸಿತ್ತು.
ಧಾರಾವಿಯಾ ಅವರ ರಾಜೀನಾಮೆಯೊಂದಿಗೆ, ಗುಜರಾತ್‌ನಲ್ಲಿ ಕಳೆದ ಕೆಲವು ತಿಂಗಳುಗಳಲ್ಲಿ ಕಾಂಗ್ರೆಸ್ ಪಕ್ಷ ತ್ಯಜಿಸಿದ ಶಾಸಕರ ಸಂಖ್ಯೆ ಐದಕ್ಕೇರಿದೆ.
ಈ ಐವರು ಶಾಸಕರಲ್ಲದೆ, ಇನ್ನೋರ್ವ ಕಾಂಗ್ರೆಸ್ ಶಾಸಕ ಭಗವಾನ್ ಬಾರಾಡ್ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ದೋಷಿಯೆಂದು ಪರಿಗಣಿಸಿದ ನ್ಯಾಯಾಲಯ ಅವರಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದರಿಂದ, ಅವರು ಶಾಸಕತ್ವದಿಂದ ಅನರ್ಹಗೊಂಡಿದ್ದರು. ಕಳೆದ ವರ್ಷದ ಜುಲೈನಲ್ಲಿ ಕಾಂಗ್ರೆಸ್ ಶಾಸಕ ಕುನ್ವರ್ಜಿ ಬವಾಲಿಯಾ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಹಾಗೂ ಆನಂತರ ರಾಜ್ಯ ಸರಕಾರದ ಸಂಪುಟ ಸಚಿವರಾಗಿ ಸೇರ್ಪಡೆಗೊಂಡಿದ್ದರು. ಆನಂತರ ಅವರು ಉಪಚುನಾವಣೆಯಲ್ಲಿ ಬಿಜೆಪಿ ಯಿಂದ ಸ್ಪರ್ಧಿಸಿ, ಗೆಲುವು ಸಾಧಿಸಿದ್ದರು.
ಕಳೆದ ತಿಂಗಳು, ಮೆಹ್ಸಾನದ ಉಂಝಾ ಕ್ಷೇತ್ರದ ಶಾಸಕಿ ಆಶಾ ಪಟೇಲ್ ಅವರು ಶಾಸಕತ್ವಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರಿದ್ದರು. 182 ಸದಸ್ಯ ಬಲದ ಗುಜರಾತ್ ವಿಧಾನಸಭೆಯಲ್ಲಿ ಬಿಜೆಪಿಯು ಈಗ 100 ಶಾಸಕರನ್ನು ಹೊಂದಿದ್ದರೆ, ಕಾಂಗ್ರೆಸ್‌ನಲ್ಲಿ 71 ಶಾಸಕರಿದ್ದಾರೆ.