ಮತದಾನ ರಮಝಾನ್ ಉಪವಾಸಕ್ಕೆ ಪರಿಣಾಮ ಬೀರುತ್ತದೆ ಎನ್ನುವುದು ಅಸಂಬದ್ಧ: ಒವೈಸಿ

Update: 2019-03-11 17:55 GMT

ಹೊಸದಿಲ್ಲಿ,ಮಾ.11: ರಮಝಾನ್ ತಿಂಗಳಲ್ಲಿ ಲೋಕಸಭಾ ಚುನಾವಣೆಯನ್ನು ನಡೆಸಲಾಗುತ್ತಿರುವ ಬಗ್ಗೆ ವ್ಯಕ್ತವಾಗುತ್ತಿರುವ ಆತಂಕಗಳನ್ನು ಅಖಿಲ ಭಾರತ ಮಜ್ಲಿಸೆ ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷದ ಅಸಾದುದ್ದೀನ್ ಒವೈಸಿ ಸೋಮವಾರ ತಳ್ಳಿಹಾಕಿದ್ದಾರೆ. ಈ ವಿಷಯದ ಕುರಿತಾಗಿ ವಿವಾದವೆಬ್ಬಿಸುವುದು ಸರಿಯಲ್ಲ ಹಾಗೂ ಅನಪೇಕ್ಷಣೀಯವೆಂದು ಅವರು ಪ್ರತಿಪಾದಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಲೋಕಸಭಾ ಚುನಾವಣೆಗಳನ್ನು ಏಳು ಹಂತಗಳಲ್ಲಿ ನಡೆಸುವುದರಿಂದ, ರಮಝಾನ್ ಉಪವಾಸ ವ್ರತ ಹಾಗೂ ಬೇಸಿಗೆಯ ಕಾರಣದಿಂದಾಗಿ ಜನರಿಗೆ ಅನಾನುಕೂಲಕರವಾಗಲಿದೆ ಎಂದು ಟಿಎಂಸಿ ನಾಯಕರೊಬ್ಬರು ಆಕ್ಷೇಪ ವ್ಯಕ್ತಪಡಿಸಿದ ಮರುದಿನ, ಒವೈಸಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಮಾಜವಾದಿ ಪಕ್ಷದ ನಾಯಕರೊಬ್ಬರು ಕೂಡಾ, ರಮಝಾನ್ ತಿಂಗಳಲ್ಲಿ ಮತದಾನದಲ್ಲಿ ಕಡಿಮೆ ಸಂಖ್ಯೆಯ ಮುಸ್ಲಿಮರು ಮತದಾನದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆಯೆಂದು ಆತಂಕ ವ್ಯಕ್ತಪಡಿಸಿದ್ದರು. 2019ರ ಸಾರ್ವತ್ರಿಕ ಚುನಾವಣೆಯ ದಿನಾಂಕಗಳನ್ನು ಚುನಾವಣಾ ಆಯೋಗವು ರವಿವಾರ ಘೋಷಿಸಿತ್ತು

 ‘‘ ಮುಸ್ಲಿಮರ ಹೊಣೆಗಾರಿಕೆಯನ್ನು ವಹಿಸಿಕೊಳ್ಳಕೂಡದೆಂದು ನಾನು ಎಲ್ಲಾ ರಾಜಕೀಯ ಪಕ್ಷಗಳಿಗೆ ಹೇಳಬಯಸುತ್ತಿದ್ದೇನೆ ಎಂದು ಒವೈಸಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ‘ಚುನಾವಣೆಗಳು ಬರುತ್ತವೆ, ಹೋಗುತ್ತವೆ. ಆದರೆ ಮುಸ್ಲಿಮರು ಉಪವಾಸವ್ರತವನ್ನು ಕೈಗೊಳ್ಳುತ್ತಾರೆ, ಅವರು ಸಂಪೂರ್ಣ ಧಾರ್ಮಿಕ ಶ್ರದ್ಧೆಯೊಂದಿಗೆ ರಮಝಾನ್ ಉಪವಾಸ ಆಚರಿಸುತ್ತಾರೆ. ರಮಝಾನ್ ವೇಳೆ ಉಪವಾಸ ವ್ರತವನ್ನು ಆಚರಿಸುವುದರಿಂದ ಮತದಾನದ ಪ್ರಮಾಣದ ಮೇಲೆ ಪರಿಣಾಮ ಉಂಟಾಗಲಿದೆಯೆಂದು ಹೇಳುವುದು ಅಸಂಬದ್ಧವಾದುದಾಗಿದೆ” ಇದಕ್ಕೆ ವ್ಯತಿರಿಕ್ತವಾಗಿ, ರಮಝಾನ್ ವೇಳೆ ಮುಸ್ಲಿಮರು ಹೆಚ್ಚಿನ ಧಾರ್ಮಿಕ ಶ್ರದ್ಧೆಯಲ್ಲಿ ತೊಡಗುವುದರಿಂದ ಅವರ ಶೇಕಡವಾರು ಮತದಾನದ ಪ್ರಮಾಣದಲ್ಲಿ ಹೆಚ್ಚಳವಾಗಲಿದೆಯೆಂದು ನಾನು ಭಾವಿಸುತ್ತೇನೆ’’ಎಂದವರು ಹೇಳಿದ್ದಾರೆ.

ಒಂದು ವೇಳೆ, ಲೋಕಸಭೆಯು ಜೂನ್ 3ರಂದು ನೂತನ ಲೋಕಸಭೆ ರಚನೆಯಾಗಬೇಕಿದ್ದು, ಖಂಡಿತವಾಗಿಯೂ ಚುನಾವಣಾ ಆಯೋಗವು ಅದಕ್ಕಿಂತ ಮೊದಲು ಚುನಾವಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗುತ್ತದೆ. ರಮಝಾನಂ ತಿಂಗಳು ಮೇ 5ರಂದು ಆರಂಭಗೊಂಡು, ಜೂನ್ 4ರಂದು ಕೊನೆಗೊಳ್ಳುತ್ತದೆ. ಹೀಗಾಗಿ ರಮಝಾನ್ ತಿಂಗಳಲ್ಲಿ ಚುನಾವಣೆ ನಡೆಯಬಾರದೆಂದು ಹೇಳುವುದು ತಪ್ಪು’’ ಎಂದು ಹೈದರಾಬಾದ್ ಮೂಲದ ಸಂಸದರಾದ ಒವೈಸಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News