×
Ad

ಪ್ರಾಮಾಣಿಕರಾಗಿದ್ದರೆ ವಿಶ್ವವೇ ನಮ್ಮನ್ನು ಗುರುತಿಸುತ್ತೆ: ನಾಝ್ ಜೋಶಿ

Update: 2019-03-12 14:43 IST

ಮಂಗಳೂರು, ಮಾ.12: ‘‘ನಾವೂ ಈ ಸಮಾಜದ ಒಂದು ಭಾಗ. ಮಾತ್ರವಲ್ಲ, ನಾವು ಮಾಡುವ ಕೆಲಸದ ಜತೆಗೆ ನಾವು ಪ್ರಾಮಾಣಿಕರಾಗಿದ್ದಾರೆ ವಿಶ್ವವೇ ನಮ್ಮನ್ನು ಗುರುತಿಸುತ್ತದೆ ಎಂಬುದಕ್ಕೆ ನಾನೇ ಉದಾಹರಣೆ’’.

ಇದು 2018ರ ಮಿಸ್ ವರ್ಲ್ಡ್ ಡೈವರ್ಸಿಟಿ ಕಿರೀಟವನ್ನು ತನ್ನದಾಗಿಸಿಕೊಂಡ ಭಾರತದ ಪ್ರಥಮ ತೃತೀಯ ಲಿಂಗಿ ನಾಝ್ ಜೋಶಿಯ ಹೆಮ್ಮೆಯ ನುಡಿ.
ಪರಿವರ್ತನಾ ಚಾರಿಟೆಬಲ್ ಟ್ರಸ್ಟ್ ವತಿಯಿಂದ ರೋಶನಿ ನಿಲಯ ಕಾಲೇಜು ಸಹಭಾಗಿತ್ವದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಇಂದು ನಡೆದ ಮಂಗಳ ಮುಖಿಯರ  ದಿನಾಚರಣೆಯಲ್ಲಿ ಭಾಗವಹಿಸಿದ್ದ ಆಕೆ, ವಿಶ್ವದ ನೂರಾರು ಸುಂದರಿಯ ನಡುವೆ ತಾನು ವಿಶ್ವ ಕಿರೀಟವನ್ನು ಮುಡಿಗೇರಿಸಿಕೊಂಡ ಹಿಂದಿನ ತನ್ನ ಜೀವನಾನುಭವವನ್ನು ಹಂಚಿಕೊಂಡರು.

‘‘ಪಂಜಾಬ್‌ನ ಕುಟುಂಬವೊಂದರಲ್ಲಿ ಹುಟ್ಟಿದ ನನ್ನನ್ನು 7ನೆ ವಯಸ್ಸಿನಲ್ಲಿಯೇ ತೃತೀಯ ಲಿಂಗಿ ಎಂದು ಗೊತ್ತಾದಾಗ ನನ್ನನ್ನು ಕೊಲ್ಲಲು ಪ್ರಯತ್ನಿಸಲಾಯಿತು. ಕೊನೆಗೆ ನನ್ನನ್ನು ಮಾರಿಬಿಟ್ಟರು. ಮುಂಬೈನಲ್ಲಿ ಬೀದಿಗೆ ಸೇರಿದ ನಾನು ಅಲ್ಲಿ ಡಾಬಾಗಳಲ್ಲಿ, ರೆಸ್ಟೋರೆಂಟ್‌ಗಳಲ್ಲಿ ಕೆಲಸ ಮಾಡಿದೆ. ಅಸಹಾಯಕಳಾಗಿದ್ದ ನಾನು ನಮ್ಮ ಸಮುದಾಯ ನಡೆಸುತ್ತಿರುವ ಭಿಕ್ಷಾಟನೆ, ಮೈ ಮಾರುವ ದಂಧೆಯಲ್ಲೂ ತೊಡಗಬೇಕಾಯಿತು. ನಾಲ್ಕು ವರ್ಷ ಕತ್ತಲ ಬದುಕು ನನ್ನದಾಗಿತ್ತು. ಬಾರ್ ಡ್ಯಾನ್ಸರ್ ಆಗಿಯೂ ಕೆಲಸ ಮಾಡಿದೆ. ಆದರೆ ನಾನು ಓದು ನಿಲ್ಲಿಸಿರಲಿಲ್ಲ. ನನ್ನ ಅಸಹಾಯಕ ಬದುಕಿನ ನಡುವೆಯೂ ಓದನ್ನು ಮುಂದುವರಿಸಿ ಫ್ಯಾಶನ್ ಡಿಸೈನರ್ ಆಗಿ, ಮಾಡೆಲ್ ಆಗಿ ಕೊನೆಗೊಂದು ದಿನ ವಿಶ್ವದ ಸುಂದರಿಯರ ಜತೆ ಸ್ಪರ್ಧಿಸಿ ಮಿಸ್ ಡೈವರ್ಸಿಟಿ ಕಿರೀಟವನ್ನು ಮುಡಿಗೇರಿಸಿಕೊಂಡೆ.

ತೆಹೆಲ್ಕಾ, ಅಮೆಝಾನ್ ಇಂಡಿಯಾ ಮ್ಯಾಗಝೀನ್‌ಗಳ ಮುಖಪುಟದಲ್ಲಿ ಕಾಣಿಸಿಕೊಂಡೆ. ಇದಕ್ಕೆ ಮುಖ್ಯ ಕಾರಣ, ನಾನು ನೋವು, ಕಷ್ಟಗಳಿಗೆ ಕುಗ್ಗಲಿಲ್ಲ. ಬದಲಾಗಿ ನನ್ನನ್ನು ನಾನು ಸದೃಢಳಾಗಿಸಿಕೊಂಡು ಮುಂದುವರಿದೆ. ಹೀಗಾಗಿ ಇಂದು ನಾನು ಈ ಸ್ಥಾನಕ್ಕೇರಿದ್ದೇನೆ’’ ಎಂದು ಹೇಳುತ್ತಾ ನಾಝ್‌ರವರು, ನಮ್ಮಲ್ಲಿರುವ ಪ್ರತಿಭೆಯೊಂದಿಗೆ ನಾವು ಎಂತಹ ಅಸಹಾಯಕ ಪರಿಸ್ಥಿತಿಯಲ್ಲೂ ಪ್ರಾಮಾಣಿಕತೆಯಿಂದ ಮುಂದುವರಿದಾಗ ಜಯ ಸಿಕ್ಕೇ ಸಿಗುತ್ತದೆ ಎಂದು ಅಲ್ಲಿದ್ದ ಮಂಗಳಮುಖಿಯರನ್ನುದ್ದೇಶಿಸಿ ಪ್ರೋತ್ಸಾಹದ ನುಡಿಗಳನ್ನಾಡಿರು.

ಮಂಗಳ ಮುಖಿಯರ ದಿನಾಚರಣೆ ಅಂಗವಾಗಿ ಬೆಲೂನ್‌ಗಳನ್ನು ಹಾರಿಬಿಟ್ಟು ಕೇಕ್ ಕತ್ತರಿಸಲಾಯಿತು. ಇದೇ ವೇಳೆ ಬೆಂಗಳೂರಿನ ಮಂಗಳಮುಖಿ ಪವಿತ್ರಮ್ಮ ಹಾಗೂ ನಾಝ್ ಜೋಶಿ ಅವರನ್ನು ಪರಿವರ್ತನಾ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಂಆರ್‌ಪಿಎಲ್‌ನ ಜಿಎಂ ಲಕ್ಷ್ಮೀ ಕುಮಾರನ್‌ರವರು, ಸಂಸ್ಥೆಯ ಸಿಬ್ಬಂದಿಯಿಂದ ಗಂಗಮ್ಮ ಎಂಬವರಿಗೆ ನೀಡಲಾದ ಗಾಲಿಕುರ್ಚಿಯನ್ನು ಹಸ್ತಾಂತರಿಸಿದರು.

ಕಾಲೇಜಿನ ಪ್ರಾಂಶುಪಾಲೆ ಜೂಲಿಯೆಟ್ ಉಪಸ್ಥಿತರಿದ್ದರು. ಟ್ರಸ್ಟ್‌ನ ಸಂಸ್ಥಾಪಕಿ ವಾಯ್ಲೆಟ್ ಪಿರೇರಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಧ್ಯಾ ಸ್ವಾಗತಿಸಿದರು.

ನಮಗೆ ಧರ್ಮ ಬೇಧವಿಲ್ಲ: ರಮ್ಯಾ ಗೌಡ

‘‘ನಮ್ಮ ಸಮುದಾಯದಲ್ಲಿ ಎಲ್ಲಾ ಧರ್ಮದವರಿದ್ದಾರೆ. ನಾವೆಂದೂ ಬೇಧ ಭಾವ ಮಾಡಿಲ್ಲ. ಒಂದೇ ತಟ್ಟೆಯಲ್ಲಿ ಊಟ ಮಾಡುತ್ತೇವೆ. ಒಬ್ಬರಿಗೊಬ್ಬರು ಕಷ್ಟ ಸುಖವನ್ನು ಹಂಚಿಕೊಳ್ಳುತ್ತೇವೆ. ಆದರೆ ಮೇಲಿನಿಂದ ನೇರವಾಗಿ ಭೂಮಿಗೆ ಬಂದವರಲ್ಲ. ನಾವೂ ನಿಮ್ಮಂತೆಯೇ ತಾಯಿಯ ಗರ್ಭದಿಂದಲೇ ಜನಿಸಿದವರು. ನಮ್ಮನ್ನು ಸಮಾಜದಿಂದ ದೂರವಿರಿಸಬೇಡಿ’’ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಮ್ಯಾ ಗೌಡ ಮನವಿ ಮಾಡಿದರು.

‘‘ನಿಜ ನಾವು ಭಿಕ್ಷಾಟನೆ ಮಾಡುತ್ತೇವೆ. ವೇಶ್ಯಾವಾಟಿಕೆಯನ್ನೂ ಮಾಡುತ್ತೇವೆ. ಇದು ಅಸಹಾಯಕತೆಯಿಂದಾಗಿ. ನಮಗೆ ಯಾರೂ ಮನೆ ನೀಡುವುದಿಲ್ಲ. ಉದ್ಯೋಗ ಕೊಡುವುದಿಲ್ಲ. ಹಾಗಿರುವಾಗ ನಾವು ಜೀವನೋಪಾಯಕ್ಕೆ ನಮಗೆ ಮನಸ್ಸಿಲ್ಲವಾದರೂ ಬದುಕಿಗಾಗಿ ಈ ಕೆಲಸವನ್ನು ಮಾಡಬೇಕಾಗುತ್ತದೆ. ಇಂತಹ ಕೆಲಸ ಮಾಡಲು ನಾಚಿಕೆಯಾಗುತ್ತದೆ. ಆದರೆ ಇದು ಅನಿವಾರ್ಯ. ಸುಪ್ರೀಂ ಕೋರ್ಟ್ ನಮಗೆ ಎಲ್ಲಾ ರೀತಿಯ ಸ್ಥಾನಮಾನ ನೀಡಿ ಗೌರವಿಸಿದೆ. ಸಮಾಜದಿಂದಲೂ ನಾವು ಅದನ್ನು ಬಯುಸುತ್ತಿದ್ದೇವೆ. ಸ್ವಾಭಿಮಾನದ ಬದುಕಿಗೆ ನಮಗೂ ಒಂದು ದಾರಿಯನ್ನು ಮಾಡಿಕೊಡುವಲ್ಲಿ ಸಮಾಜ ನಮ್ಮ ಜತೆ ಕೈಜೋಡಿಸಬೇಕಿದೆ’’ ಎಂದು ರಮ್ಯಾ ಗೌಡ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News