×
Ad

ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ ಆಝಾದ್ ಬಂಧನ

Update: 2019-03-12 14:43 IST

 ಹೊಸದಿಲ್ಲಿ,ಮಾ.12: ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಝಾದ್‌ರನ್ನು ಉತ್ತರಪ್ರದೇಶದ ದೇವೊಬಂದ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಆಝಾದ್‌ರನ್ನು ಪೊಲೀಸ್ ಸ್ಟೇಶನ್‌ಗೆ ಕರೆದೊಯ್ಯದಂತೆ ಪೊಲೀಸ್ ವಾಹನಕ್ಕೆ ತಡೆಯೊಡ್ಡಿದ ಆಝಾದ್ ಬೆಂಬಲಿಗರು ಪೊಲೀಸರೊಂದಿಗೆ ಘರ್ಷಣೆ ಇಳಿದರು.

ಕಾನ್ಶಿ ರಾಮ್ ಜನ್ಮದಿನವಾದ ಮಾ.15 ರಂದು ದಿಲ್ಲಿಯಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಹಾಜರಾಗಲು ದಲಿತ ಮುಖಂಡ ಆಝಾದ್ ಬಯಸಿದ್ದರು. ಆದರೆ, ಅವರಿಗೆ ಅನುಮತಿ ನಿರಾಕರಿಸಲಾಗಿದೆ.

  ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಸಂಘಟನೆಯು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವೆ ಸ್ಮತಿ ಇರಾನಿ ವಿರುದ್ಧ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಬೆಂಬಲ ನೀಡಲಿದೆ ಎಂದು ಆಝಾದ್ ಕಳೆದ ವಾರ ಘೋಷಿಸಿದ್ದರು. ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ಸಂಸತ್ತಿನಲ್ಲಿ ಹೇಳಿಕೆ ನೀಡಿರುವ ಸಮಾಜವಾದಿ ಪಕ್ಷದ ಮಾಜಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್‌ರ ನಿಲುವನ್ನು ಆಝಾದ್ ಪ್ರಶ್ನಿಸಿದ್ದರು.

ರಾಷ್ಟ್ರೀಯ ಭದ್ರತಾ ಕಾಯ್ದೆ(ಎಎಸ್‌ಎ)ಅಡಿ ಆಝಾದ್ ಕಳೆದ ವರ್ಷ ಜೈಲುವಾಸ ಅನುಭವಿಸಿದ್ದರು. ಮೇ 5 ರಂದು ಉತ್ತರಪ್ರದೇಶದ ಸಹರಾನ್ಪುರದ ಶಬ್ಬೀರ್‌ಪುರದಲ್ಲಿ ನಡೆದ ಜಾತಿ ಹಿಂಸಾಚಾರದಲ್ಲಿ ಓರ್ವ ವ್ಯಕ್ತಿ ಮೃತಪಟ್ಟು, ಇತರ 16 ಮಂದಿ ಗಾಯಗೊಂಡ ಪ್ರಕರಣದಲ್ಲಿ ಜೂ.2017ರಲ್ಲಿ ಹಿಮಾಚಲ ಪ್ರದೇಶದಲ್ಲಿ ಆಝಾದ್ ಬಂಧಿಸಲ್ಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News