ಕೂದಲು ಕಸಿ ಮಾಡಿಸಿಕೊಂಡ ಎರಡೇ ದಿನದಲ್ಲಿ ಸಾವನ್ನಪ್ಪಿದ ಮುಂಬೈ ಉದ್ಯಮಿ

Update: 2019-03-12 10:16 GMT

ಮುಂಬೈ, ಮಾ. 12 : ನಗರದ ಸಾಕಿ ನಾಕ ಪ್ರದೇಶದ ಉದ್ಯಮಿಯೊಬ್ಬರು ಕೂದಲು ಕಸಿ ಮಾಡಿಸಿಕೊಂಡ ಎರಡು ದಿನಗಳ ನಂತರ ಮೃತಪಟ್ಟ ಘಟನೆ ವರದಿಯಾಗಿದೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ ಹಾಗೂ ಪೋಸ್ಟ್ ಮಾರ್ಟಂ ವರದಿ ಕೂಡ ಈ ನಿಟ್ಟಿನಲ್ಲಿ ಸ್ಪಷ್ಟತೆ ಒದಗಿಸಿಲ್ಲ.

ಆದರೆ ಕೂದಲು ಕಸಿ ಮಾಡಿಸಿಕೊಂಡ ನಂತರ ಕಾಣಿಸಿಕೊಂಡ ಅಲರ್ಜಿಕ್ ಅಡ್ಡ ಪರಿಣಾಮದಿಂದ ಸಾವು ಸಂಭವಿಸಿರಬಹುದೆಂದು ವ್ಯಕ್ತಿ ಕೂದಲು ಕಸಿ ಮಾಡಿಸಿಕೊಂಡಿದ್ದ ಆಸ್ಪತ್ರೆ ತಿಳಿಸಿದೆ.

ಶುಕ್ರವಾರ ಉಸಿರಾಟದ ಸಮಸ್ಯೆ ಹಾಗೂ  ಮುಖ ಮತ್ತು ಗಂಟಲಲ್ಲಿ ಊತ ಉಂಟಾಗಿದ್ದರಿಂದ 43 ವರ್ಷದ ಶ್ರವಣ್ ಕುಮಾರ್ ಚೌಧುರಿ ಪೊವೈ ಪ್ರದೇಶದಲ್ಲಿರುವ ಹೀರಾನಂದನಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ಪರೀಕ್ಷಿಸಿದ್ದ ವೈದ್ಯರು ಜೀವಕ್ಕೇ ಅಪಾಯವೊಡ್ಡಬಹುದಾದ ಅಲರ್ಜಿಕ್ ಅಡ್ಡಪರಿಣಾಮ ಅನಾಫಿಲ್ಯಾಕ್ಸಿಸ್ ಲಕ್ಷಣ ಇದೆಂದು ಕಂಡುಕೊಂಡಿದ್ದರು.

ಚೌಧುರಿ ಅವರ ತಪಾಸಣೆಗೆ ನುರಿತ ಹೃದ್ರೋಗ ತಜ್ಞರನ್ನು ಕರೆಸಲಾಯಿತಾದರೂ ಶನಿವಾರ ಮುಂಜಾನೆ 6.45ರ ಸುಮಾರಿಗೆ ಅವರು ಮೃತಪಟ್ಟಿದ್ದಾರೆ. ಸುಮಾರು 15 ಗಂಟೆಗಳಿಗೂ ಹೆಚ್ಚು ಕಾಲ ತಗಲಿದ ಪ್ರಕ್ರಿಯೆಯಲ್ಲಿ ಚೌಧುರಿಗೆ 9,500 ಕೂದಲು ಕಸಿ ಮಾಡಲಾಗಿತ್ತೆಂದು ಪೊಲೀಸರು ತಿಳಿಸಿದ್ದಾರೆ.

2016ರಲ್ಲಿ ನಡೆದಿದ್ದ ಇಂತಹುದೇ ಇನ್ನೊಂದು ಘಟನೆಯಲ್ಲಿ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿ ಚೆನ್ನೈನ 22 ವರ್ಷದ ಸಂತೋಷ್ ಕೂದಲು ಕಸಿ ಮಾಡಿಸಿಕೊಂಡ ಎರಡೇ ದಿನಗಳಲ್ಲಿ ಸಾವನ್ನಪ್ಪಿದ್ದ. ಹತ್ತು ಗಂಟೆ ಅವಧಿಯಲ್ಲಿ 1,200 ಕೂದಲು ಕಸಿ ಮಾಡಿಸಿಕೊಂಡ ನಂತರ ಆತನಿಗೆ ಜ್ವರ ಕಾಡಿತ್ತು ಎಂದು ಆತನ ತಾಯಿ ಆಗ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News