ಹಫೀಝ್ ಸಯೀದ್ ನನ್ನು ‘ಹಫೀಝ್ ಜೀ’ ಎಂದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್: ವಿಡಿಯೋ ಮೂಲಕ ಕಾಂಗ್ರೆಸ್ ತಿರುಗೇಟು

Update: 2019-03-12 10:20 GMT

ಹೊಸದಿಲ್ಲಿ, ಮಾ.12: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಭಾಷಣವೊಂದರಲ್ಲಿ ಭಯೋತ್ಪಾದಕ ಸಂಘಟನೆ ಜೈಷ್ ನ  ಮುಖ್ಯಸ್ಥ ಉಗ್ರ ಮಸೂದ್ ಅಝರ್ ನನ್ನು ‘ಮಸೂದ್ ಅಝರ್ ಜೀ’ ಎಂದು ಸಂಬೋಧಿಸಿದ್ದಾರೆಂದು ಬಿಜೆಪಿ ಆರೋಪಿಸಿದ್ದು, ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿತ್ತು. ಈ ಬಗ್ಗೆ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಪ್ರಸಾದ್ ರಾಹುಲ್ ಅವರನ್ನು ಅಣಕವಾಡಿ ಕಾಂಗ್ರೆಸ್ ಪಕ್ಷಕ್ಕೇನಾಗುತ್ತಿದೆ ಎಂದು ಪ್ರಶ್ನಿಸಿದ್ದರು.

ಮಂಗಳವಾರ ಇದಕ್ಕೆ ಕಾಂಗ್ರೆಸ್ ತಿರುಗೇಟು ನೀಡಿದೆ. ರವಿಶಂಕರ್ ಪ್ರಸಾದ್ ಅವರೇ ಒಂದು ಸಂದರ್ಭದಲ್ಲಿ ಇನ್ನೊಬ್ಬ ಉಗ್ರ ಹಫೀಝ್ ಸಯೀದ್ ನನ್ನು ‘ಹಫೀಝ್ ಜೀ’ ಎಂದು ಸಂಬೋಧಿಸಿರುವ ವೀಡಿಯೋವನ್ನು ಕಾಂಗ್ರೆಸ್ ವಕ್ತಾರೆ ಪ್ರಿಯಾಂಕ ಚತುರ್ವೇದಿ ಶೇರ್ ಮಾಡಿದ್ದಾರೆ.

ವೀಡಿಯೋದಲ್ಲಿ ರವಿ ಶಂಕರ್ ಪ್ರಸಾದ್ ಅವರು `ಹಫೀಝ್ ಜೀ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ,'' ಎಂದು ಹೇಳುತ್ತಿರುವುದು ಕೇಳಿಸುತ್ತದೆ.   #BJPLovesTerrorists ಎಂಬ ಹ್ಯಾಶ್ ಟ್ಯಾಗ್ ಜತೆಗೆ ಪ್ರಿಯಾಂಕ ಚತುರ್ವೇದಿ ಈ ವಿಡಿಯೋ ಟ್ವೀಟ್ ಮಾಡಿದ್ದಾರೆ.

“ಹಫೀಝ್ ಸಯೀದ್ ಮತ್ತಾತನ ಸಹಚರರಿಗೆ ಬಿಜೆಪಿಗಿರುವ ಆದರವು ಅವರು ತಮ್ಮ ವಿಶೇಷ ದೂತ ವೇದ್ ಪಿ ವೈದಿಕ್ ರನ್ನು ಆತನ (ಸಯೀದ್) ಜತೆ ಮಾತುಕತೆಗೆಂದು ಹಾಗೂ ಆಲಂಗಿಸಲು ಕಳುಹಿಸಿರುವುದರಿಂದ ಸ್ಪಷ್ಟವಾಗುತ್ತದೆ. ರಾಜತಾಂತ್ರಿಕತೆ ಆಗಿನಿಂದ ಆರಂಭವಾಗಿತ್ತು,'' ಎಂದು ಅವರು ಟ್ವೀಟ್ ಮಾಡಿದ್ದಾರೆ.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಉಗ್ರ ಮಸೂದ್ ಅಝರ್ ಹಿಂದಿನಿಂದ ನಡೆದುಕೊಂಡು ಬರುತ್ತಿರುವ ಫೋಟೋವನ್ನು ಪ್ರಿಯಾಂಕ ಚತುರ್ವೇದಿ ತಮ್ಮ ಇನ್ನೊಂದು  ಟ್ವೀಟ್ ನಲ್ಲಿ ಶೇರ್ ಮಾಡಿದ್ದಾರೆ.

“ಹಫೀಝ್ ಸಯೀದ್, ಮಸೂದ್ ಅಜರ್ ಮತ್ತವರ ಸಹಚರರಿಗೆ ಬಿಜೆಪಿ ತೋರಿಸಿದ ಹಲವು ಪ್ರೇಮ ಸಂಕೇತಗಳಲ್ಲಿ ಇದೂ ಒಂದು, ರಾಷ್ಟ್ರೀಯ ಭದ್ರತಾ ಸಲಹೆಗಾರ ಮಸೂದ್ ಅಜರ್ ಜತೆಗೆ ಅವರಿರುವ ಈ ಚಿತ್ರವನ್ನು ದೇಶ ಯಾವತ್ತೂ ಮರೆಯುವುದಿಲ್ಲ'' ಎಂದು ಅವರು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News