ಸ್ಫೋಟಕ ತಯಾರಿಸುವುದು ಹೇಗೆಂದು ಮಸೂದ್ ಅಝರ್ ಗೆ ತಿಳಿದಿರಲಿಲ್ಲ ಎಂದು ಹೇಳಿದ್ದ ಅಜಿತ್ ದೋವಲ್: ಆರೋಪ

Update: 2019-03-12 11:01 GMT

ಹೊಸದಿಲ್ಲಿ, ಮಾ.12: ಉಗ್ರ ಮಸೂದ್ ಅಝರ್ ಕುರಿತಂತೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತೀವ್ರ ವ್ಯಾಗ್ಯುದ್ಧ ಮುಂದುವರಿದಿರುವಂತೆಯೇ ಇಂದು ಕಾಂಗ್ರೆಸ್ ಬಿಜೆಪಿ ವಿರುದ್ಧ ಮತ್ತೊಂದು ಅಸ್ತ್ರ ಪ್ರಯೋಗಿಸಿದೆ.  ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ 2010ರಲ್ಲಿ ನೀಡಿದ್ದ ಸಂದರ್ಶನವೇ ಈ ಅಸ್ತ್ರವಾಗಿದೆ. ಮಸೂದ್ ಅಝರ್ ನನ್ನು ಎರಡು ದಶಕಗಳ ಹಿಂದೆ ಬಿಡುಗಡೆಗೊಳಿಸಿದ್ದಕ್ಕೆ ಆಗಿನ ಬಿಜೆಪಿ ಸರಕಾರವನ್ನು ಈ ಸಂದರ್ಶನದಲ್ಲಿ ದೋವಲ್ ದೂಷಿಸಿದ್ದರು.

“ಮಸೂದ್ ಅಝರ್ ನ ಬಿಡುಗಡೆ ಒಂದು ರಾಜಕೀಯ ನಿರ್ಧಾರವಾಗಿತ್ತು” ಎಂದು ದೋವಲ್ ಹೇಳಿದ್ದರು. “ತಮ್ಮ ದೇಶ ವಿರೋಧಿ ಕೃತ್ಯವನ್ನು ಪ್ರಧಾನಿ ಮೋದಿ ಹಾಗೂ ರವಿಶಂಕರ್ ಪ್ರಸಾದ್ ಈಗಲಾದರೂ ಒಪ್ಪಿಕೊಳ್ಳುತ್ತಾರೆಯೇ?'' ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ ಟ್ವೀಟ್ ಮಾಡಿ ದೋವಲ್ ಸಂದರ್ಶನದ ಸ್ಕ್ರೀನ್ ಶಾಟ್ ಪೋಸ್ಟ್ ಮಾಡಿದ್ದಾರೆ.

ಇದೇ ಸಂದರ್ಶನವನ್ನಾಧರಿಸಿ,  ಮಸೂದ್ ಅಝರ್ ನಿಗೆ `ಕ್ಲೀನ್ ಚಿಟ್' ನೀಡಿದ್ದಕ್ಕಾಗಿ ಕಾಂಗ್ರೆಸ್ ಅಜಿತ್ ದೋವಲ್ ರನ್ನು ಟೀಕಿಸಿದೆ. "ಐಇಡಿಯನ್ನು ತಯಾರಿಸುವುದು ಹೇಗೆಂದು ಮಸೂದ್ ಅಝರ್ ಗೆ ತಿಳಿದಿಲ್ಲ. ಆತ ಮಾರ್ಕ್ಸ್ ಮ್ಯಾನ್ (ಶೂಟರ್) ಕೂಡ ಅಲ್ಲ'' ಎಂದು ದೋವಲ್ ಹೇಳಿರುವ ಸಂದರ್ಶನದ ತುಣುಕೊಂದನ್ನೂ ಸುರ್ಜೇವಾಲ ಉಲ್ಲೇಖಿಸಿದ್ದಾರೆ.

ಉಗ್ರವಾದವನ್ನು ನಿಭಾಯಿಸಲು ಕಾಂಗ್ರೆಸ್-ಯುಪಿಎ ಇದರ ನಿಜವಾದ ರಾಷ್ಟ್ರೀಯತಾವಾದಿ ನೀತಿಯನ್ನೂ ದೋವಲ್ ಆ ಸಂದರ್ಶನದಲ್ಲಿ ಹೊಗಳಿದ್ದರೆಂದು ಸುರ್ಜೇವಾಲ ಹೇಳಿಕೊಂಡಿದ್ದಾರೆ.

1999ರಲ್ಲಿ ಆಗಿನ ಅಟಲ್ ಬಿಹಾರಿ ವಾಜಪೇಯಿ ಸರಕಾರವು ಅಫ್ಗಾನಿಸ್ತಾನದ ಕಂದಹಾರ್ ಗೆ ಅಪಹರಿಸಲ್ಪಟ್ಟ  ಐಸಿ 814 ವಿಮಾನದ ಒತ್ತೆಯಾಳು ಪ್ರಯಾಣಿಕರ ಬಿಡುಗಡೆಗೆ ಬದಲಿಯಾಗಿ ಮಸೂದ್ ಅಝರ್ ಮತ್ತಿತರ ಇಬ್ಬರು ಉಗ್ರರನ್ನು ಬಿಡುಗಡೆಗೊಳಿಸಿತ್ತು.

ನಂತರ ಜೈಷ್ ಉಗ್ರ ಸಂಘಟನೆ ಸ್ಥಾಪಿಸಿದ್ದ ಅಝರ್ ಅದರ ಮೂಲಕ ಭಾರತದಲ್ಲಿ ದಾಳಿ ನಡೆಸುತ್ತಿದ್ದಾನೆ. 1999ರಲ್ಲಿ ಆತನ ಬಿಡುಗಡೆಯ ಹಿಂದೆ ಈಗ ಪ್ರಧಾನಿ ಮೋದಿಯ ಆಪ್ತರಾಗಿರುವ ದೋವಲ್ ಪ್ರಮುಖ ಪಾತ್ರ ವಹಿಸಿದ್ದರೆಂದು ಕಾಂಗ್ರೆಸ್ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News