×
Ad

ಎಲ್ಲಿವೆ 2 ಕೋಟಿ ಉದ್ಯೋಗಗಳು: ಮೋದಿ ವಿರುದ್ಧ ಗುಡುಗಿದ ಪ್ರಿಯಾಂಕಾ

Update: 2019-03-12 19:29 IST

ಹೊಸದಿಲ್ಲಿ, ಮಾ. 12: ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಂಗಳವಾರ ಮೊದಲ ಬಾರಿಗೆ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿರುವ ಪ್ರಿಯಾಂಕಾ ಗಾಂಧಿ ವಾದ್ರಾ, ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಹಾಗೂ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜವಾಬ್ದಾರಿಯುತವಾಗಿ ಮತ ಚಲಾಯಿಸುವಂತೆ ಜನರಲ್ಲಿ ವಿನಂತಿಸಿದ್ದಾರೆ.

ಪ್ರಧಾನಿ ಮೋದಿ ಅವರ ತವರೂರಾದ ಗುಜರಾತ್‌ನಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಿಯಾಂಕ, ಈ ಹಿಂದೆ ದೊಡ್ಡ ದೊಡ್ಡ ಭರವಸೆ ನೀಡಿದ ನಾಯಕರಿಗೆ ಪ್ರಶ್ನೆಗಳನ್ನು ಪೋಸ್ಟ್ ಮಾಡಲು ಆರಂಭಿಸಬೇಕು ಎಂದು ಜನರಲ್ಲಿ ವಿನಂತಿಸಿದ್ದಾರೆ. “ಎಲ್ಲಿವೆ 2 ಕೋಟಿ ಉದ್ಯೋಗಗಳು ?, ಪ್ರತಿ ಬ್ಯಾಂಕ್ ಖಾತೆಗೆ 15 ಲಕ್ಷ ರೂಪಾಯಿ ಜಮೆ ಮಾಡುವ ಪ್ರಧಾನಿ ಅವರು ನೀಡಿದ ಭರವಸೆ ಏನಾಯ್ತು ?” ಎಂದು ಪ್ರಿಯಾಂಕ ಗಾಂಧಿ ಪ್ರಶ್ನಿಸಿದ್ದಾರೆ. “ನಾನು ಭಾಷಣ ಮಾಡಲು ಬಯಸುವುದಿಲ್ಲ. ಆದರೆ, ಇದು ನನ್ನ ಮನದ ಮಾತು” ಎಂದು ಹೇಳಿದ ಪ್ರಿಯಾಂಕ ಗಾಂಧಿ, “ಈಗಿನ ಪರಿಸ್ಥಿತಿ ನೋಡುವಾಗ ನನಗೆ ನೋವು ಉಂಟಾಗುತ್ತಿದೆ. ದೇಶಾದ್ಯಂತ ದ್ವೇಷ ಹರಡುತ್ತಿದೆ. ದೇಶದ ಸಂಸ್ಥೆಗಳು ನಾಶವಾಗುತ್ತಿವೆ. ಆದರೆ, ಜನರು ಈ ದ್ವೇಷವನ್ನು ಅಳಿಸಿ ಹಾಕಬೇಕು ಹಾಗೂ ಪ್ರೀತಿ, ಸಾಮರಸ್ಯ ಬೆಳೆಸಬೇಕು” ಎಂದರು. “ಕ್ಷುಲ್ಲಕ ವಿಚಾರಗಳಿಗೆ ನಾವು ಗಮನ ಕೊಡುವ ಅಗತ್ಯತೆ ಇಲ್ಲ. ನಾವು ರೈತರ, ಯುವಕರ ಸಮಸ್ಯೆ ಹಾಗೂ ಮಹಿಳೆಯರ ಭದ್ರತೆ ಬಗ್ಗೆ ಚಿಂತಿಸಬೇಕಿದೆ. ನಿಮ್ಮ ಮತ ಆಯುಧದಂತೆ. ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡುವ ಮುನ್ನ ನೀವು ಆಳವಾಗಿ ಹಾಗೂ ಜವಾಬ್ದಾರಿಯುತವಾಗಿ ಚಿಂತಿಸಬೇಕು” ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News