×
Ad

ಯಾವ ರಾಜ್ಯದಲ್ಲೂ ಕಾಂಗ್ರೆಸ್ ಜೊತೆ ಮೈತ್ರಿಯಿಲ್ಲ: ಮಾಯಾವತಿ

Update: 2019-03-12 20:03 IST

ಹೊಸದಿಲ್ಲಿ,ಮಾ.12: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಯಾವ ರಾಜ್ಯದಲ್ಲೂ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ನಾಯಕಿ ಮಾಯಾವತಿ ಮಂಗಳವಾರ ಸ್ಪಷ್ಟಪಡಿಸಿದ್ದಾರೆ.

ಮಾಯಾವತಿ ಹೇಳಿಕೆಯಿಂದ ಬಿಜೆಪಿಯನ್ನು ಮಣಿಸಲು ವಿಪಕ್ಷಗಳು ರೂಪಿಸಿರುವ ಮಹಾಮೈತ್ರಿಗೆ ಧಕ್ಕೆಯುಂಟಾಗಿದೆ. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಜೊತೆ ಮಾಡಿಕೊಂಡಿರುವ ಚುನಾವಣಾಪೂರ್ವ ಮೈತ್ರಿ ಕುರಿತು ಮಾತನಾಡಿದ ಮಾಯಾವತಿ, ಇದು ಪರಸ್ಪರ ಗೌರವ ಮತ್ತು ಪ್ರಾಮಾಣಿಕ ಉದ್ದೇಶಗಳನ್ನು ಆಧರಿಸಿ ರೂಪುಗೊಂಡಿದೆ. ಬಿಜೆಪಿಯನ್ನು, ಮುಖ್ಯವಾಗಿ ಉತ್ತರ ಪ್ರದೇಶದಲ್ಲಿ ಮಣಿಸಲು ಎಸ್ಪಿ-ಬಿಎಸ್ಪಿ ಮೈತ್ರಿಕೂಟವೇ ಸಾಕು ಎಂದು ಅಭಿಪ್ರಾಯಿಸಿದ್ದಾರೆ. ಬಿಎಸ್ಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಹಲವು ಪಕ್ಷಗಳು ಉತ್ಸುಕವಾಗಿವೆ. ಆದರೆ ಕೇವಲ ಚುನಾವಣಾ ಲಾಭಕ್ಕಾಗಿ ಪಕ್ಷ ಏನನ್ನೂ ಮಾಡುವುದಿಲ್ಲ ಇದರಿಂದ ಬಿಎಸ್ಪಿ ಚಳುವಳಿಗೆ ಧಕ್ಕೆಯಾಗುತ್ತದೆ ಎಂದು ಲಕ್ನೋದಲ್ಲಿ ಪಕ್ಷದ ವಿವಿಧ ರಾಜ್ಯಗಳ ನಾಯಕರನ್ನು ಉದ್ದೇಶಿಸಿ ಮಾತನಾಡಿದ ಮಾಯಾವತಿ ತಿಳಿಸಿದ್ದಾರೆ.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಯನ್ನು ಮಣಿಸಲು ಕಾಂಗ್ರೆಸ್, ಎಡಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳು ಜೊತೆಯಾಗಿ ಮಹಾಮೈತ್ರಿ ಮಾಡಿಕೊಂಡಿವೆ. ಸದ್ಯ ಚುನಾವಣೆಯಲ್ಲಿ ಮತ ವಿಭಜನೆಯನ್ನು ಕಡಿಮೆ ಮಾಡಲು ಈ ಮಹಾಮೈತ್ರಿಗೆ ಹೆಚ್ಚಿನ ಪಕ್ಷಗಳನ್ನು ಸೇರಿಸಿಕೊಳ್ಳಲು ಪ್ರಯತ್ನಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News