‘ಸರ್ಫ್ ಎಕ್ಸೆಲ್’ ಎಂದು ‘ಮೈಕ್ರೋಸಾಫ್ಟ್ ಎಕ್ಸೆಲ್’ ಆ್ಯಪ್ ಗೆ ಕಡಿಮೆ ರೇಟಿಂಗ್ ನೀಡಿ ನಗೆಪಾಟಲಿಗೀಡಾದರು!

Update: 2019-03-12 15:04 GMT

ಅಹ್ಮದಾಬಾದ್, ಮಾ.12: ಹೋಳಿ ಹಬ್ಬದ ಸಂದರ್ಭ ಸರ್ಫ್ ಎಕ್ಸೆಲ್ ಬಿಡುಗಡೆ ಮಾಡಿದ ಜಾಹೀರಾತು ದೇಶದಲ್ಲೇ ಸುದ್ದಿಯಾಗಿತ್ತು. ಈ ಜಾಹೀರಾತಿನಲ್ಲಿ ಲವ್ ಜಿಹಾದ್ ಗೆ ಪ್ರೋತ್ಸಾಹ ನೀಡಲಾಗಿದೆ ಎಂದು ಸಂಘಪರಿವಾರದ ಬೆಂಬಲಿಗರು ಆರೋಪಿಸಿ ಸಾಮಾಜಿಕ ಜಾಲತಾಣದಾದ್ಯಂತ ‘ಸರ್ಫ್ ಎಕ್ಸೆಲನ್ನು ನಿಷೇಧಿಸಿ’ ಎನ್ನುವ ಆಂದೋಲನ ನಡೆಸಿದ್ದರು.

ಒಂದೆಡೆ ಲವ್ ಜಿಹಾದ್ ಎಂದು ಸಂಘಪರಿವಾರದ ಬೆಂಬಲಿಗರು ಆರೋಪಿಸುತ್ತಿದ್ದರೆ, ಮತ್ತೊಂದೆಡೆ ಜಾಹೀರಾತು ಜಾತ್ಯಾತೀತ ಮೌಲ್ಯಗಳನ್ನು ಒಳಗೊಂಡಿದ್ದು, ಸೌಹಾರ್ದದ ಸಂದೇಶ ಸಾರುತ್ತದೆ ಎಂದು ಭಾರೀ ಬೆಂಬಲ ವ್ಯಕ್ತವಾಗಿತ್ತು. ಈ ನಡುವೆ ಸರ್ಫ್ ಎಕ್ಸೆಲ್ ಆ್ಯಪ್ ಗೆ ಕಡಿಮೆ ರೇಟಿಂಗ್ ನೀಡುವ ವಿಚಾರದಲ್ಲಿ ಸಂಘಪರಿವಾರದ ಬೆಂಬಲಿಗರು ಇದೀಗ ನಗೆಪಾಟಲಿಗೀಡಾಗಿದ್ದಾರೆ.

ಫೇಸ್ ಬುಕ್ ಮತ್ತು ಟ್ವಿಟರ್ ಗಳಲ್ಲಿ Boycott Surf Excel ಎಂಬ ಅಭಿಯಾನದ ಹೊರತಾಗಿ ‘ಸರ್ಫ್ ಎಕ್ಸೆಲ್’ ಆ್ಯಪ್ ವಿರುದ್ಧ ಕ್ರಮಕ್ಕೆ ಸಂಘಪರಿವಾರ ಬೆಂಬಲಿಗರು ಕರೆ ನೀಡಿದ್ದರು. ಆದರೆ ‘ಸರ್ಫ್ ಎಕ್ಸೆಲ್’ ಆ್ಯಪ್ ಬದಲಿಗೆ ಹಲವರು ‘ಮೈಕ್ರೋಸಾಫ್ಟ್ ಎಕ್ಸೆಲ್’ಗೆ ಕಡಿಮೆ ರೇಟಿಂಗ್ ನೀಡಿರುವುದು ಇದೀಗ ವರದಿಯಾಗಿದೆ.

“ಸರ್ಫ್ ಎಕ್ಸೆಲನ್ನು ಬಹಿಷ್ಕರಿಸಿ. ಅದು ಹಿಂದೂ ವಿರೋಧಿ. ಪಾಕಿಸ್ತಾನಕ್ಕೆ ಹೋಗಿ ಬ್ಯುಸಿನೆಸ್ ಮಾಡಿ” ಎಂದು ಮೈಕ್ರೊಸಾಫ್ಟ್ ಎಕ್ಸೆಲ್ ಆ್ಯಪ್ ಗೆ ಕಡಿಮೆ ರೇಟಿಂಗ್ ಕೊಟ್ಟ ವ್ಯಕ್ತಿಯೊಬ್ಬರು ಕಮೆಂಟ್ ಮಾಡಿದ್ದಾರೆ. “ಸರ್ಫ್ ಜೊತೆಗೆ ಪಾಲುದಾರಿಗೆ ನಡೆಸಿ, ಅಂತಹ ಕೆಟ್ಟ ಧರ್ಮ ವಿರೋಧಿ ಜಾಹೀರಾತು ಬಿಡುಗಡೆ ಮಾಡುವವರೆಗೆ ನಾನು ಈ ಆ್ಯಪನ್ನು ಇಷ್ಟಪಡುತ್ತಿದ್ದೆ. ಈಗ ನಾನು ಎಕ್ಸೆಲ್ ಎಂಬ ಪದವನ್ನು ಎಲ್ಲೇ ಓದಿದರೂ ಹಿಂದೂ ವಿರೋಧಿ ಷಡ್ಯಂತ್ರವೇ ನೆನಪಿಗೆ ಬರುತ್ತಿದೆ” ಎಂದು ಮತ್ತೊಬ್ಬರು ಮೈಕ್ರೊಸಾಫ್ಟ್ ಎಕ್ಸೆಲ್ ವಿರುದ್ಧ ಕಿಡಿಕಾರಿ ಕಡಿಮೆ ರೇಟಿಂಗ್ ನೀಡಿದ್ದಾರೆ.

ಒಟ್ಟಿನಲ್ಲಿ ಸರ್ಫ್ ಎಕ್ಸೆಲ್ ಮೇಲಿನ ಸಿಟ್ಟಿಗೆ ಮೈಕ್ರೋಸಾಫ್ಟ್ ಎಕ್ಸೆಲ್ ತನ್ನ ರೇಟಿಂಗ್ ಕಳೆದುಕೊಳ್ಳುವ ಹಾಗಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News