ಬಿಜೆಪಿ, ಆರೆಸ್ಸೆಸ್ ಸಿದ್ಧಾಂತ ಸೋಲಿಸುವುದಕ್ಕಿಂತ ಯಾವುದೇ ತ್ಯಾಗ ದೊಡ್ಡದಲ್ಲ: ರಾಹುಲ್ ಗಾಂಧಿ

Update: 2019-03-12 16:12 GMT

ಹೊಸದಿಲ್ಲಿ, ಮಾ. 12: ಬಿಜೆಪಿ ಹಾಗೂ ಆರೆಸ್ಸೆಸ್ ನ ಜನಾಂಗೀಯವಾದ, ದ್ವೇಷ, ಕೋಪ ಹಾಗೂ ವಿಭಜನೆಯ ಸಿದ್ಧಾಂತವನ್ನು ಸೋಲಿಸುವುದಕ್ಕಿಂತ ಯಾವುದೇ ತ್ಯಾಗ ದೊಡ್ಡದಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಂಗಳವಾರ ಹೇಳಿದ್ದಾರೆ.

ಗಾಂಧೀಜಿ ಅವರ ಚಾರಿತ್ರಿಕ ದಂಡಿ ಯಾತ್ರೆಯ ವರ್ಷಾಚರಣೆಯ ದಿನವಾದ ಮಂಗಳವಾರ ಅಹ್ಮದಾಬಾದ್‌ನಲ್ಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ದ್ವೇಷದ ಪಡೆಯನ್ನು ಸೋಲಿಸಲು ಹೋರಾಡುವ ಪಕ್ಷದ ನಿರ್ಧಾರಕ್ಕೆ ಒತ್ತು ನೀಡಿದರು. ಈ ಪ್ರಯತ್ನಕ್ಕಿಂತ ಯಾವ ತ್ಯಾಗವೂ ದೊಡ್ಡದಲ್ಲ. ಯಾವುದೇ ಪ್ರಯತ್ನ ಕೂಡ ಸಣ್ಣದಲ್ಲ. ಈ ಹೋರಾಟದಲ್ಲಿ ಜಯ ಸಿಗಲಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ರಾಹುಲ್ ಗಾಂಧಿ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ಪಕ್ಷದ ಉನ್ನತ ನಾಯಕರು ಚುನಾವಣೆ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು. ಇಲ್ಲಿನ ಸಾಬರ್ಮತಿ ಆಶ್ರಮದಲ್ಲಿ ಮಹಾತ್ಮಾ ಗಾಂಧಿ ಅವರಿಗೆ ಗೌರವ ಸಲ್ಲಿಸಿ ಪಕ್ಷ ಸಭೆ ಆರಂಭಿಸಿತು. ಪಶ್ಚಿಮ ಉತ್ತರಪ್ರದೇಶದ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿ ಇತ್ತೀಚೆಗೆ ಆಯ್ಕೆಯಾಗಿರುವ ಪ್ರಿಯಾಂಕಾ ಗಾಂಧಿಗೆ ಇದು ಮೊದಲ ಅಧಿಕೃತ ಸಭೆ. ಚುನಾವಣೆಯ ದಿನಾಂಕ ನಿಗದಿಯಾದ ಎರಡು ದಿನಗಳ ಬಳಿಕ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಈ ಸಭೆ ನಡೆಸಿರುವುದರಿಂದ ಇದು ಪ್ರಾಮುಖ್ಯತೆ ಪಡೆದುಕೊಂಡಿದೆ.

58 ವರ್ಷಗಳ ಬಳಿಕ ಗುಜರಾತ್‌ನಲ್ಲಿ ಈ ಸಭೆ ನಡೆದಿದೆ. ಗುಜರಾತ್‌ನ ಭಾವನಗರದಲ್ಲಿ 1961ರಲ್ಲಿ ಕೊನೆಯ ಬಾರಿಗೆ ಕಾಂಗ್ರೆಸ್ ಕಾರ್ಯಕಾರಿಯ ಕೊನೆಯ ಸಭೆ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News