ಅಶಕ್ತ ಮತದಾರರಿಗೆ ಬೂತ್ ತೆರಳಲು ವಾಹನ ವ್ಯವಸ್ಥೆ: ಸಿಂಧೂ

Update: 2019-03-12 15:16 GMT

 ಉಡುಪಿ, ಮಾ.12: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ವಿಕಲಚೇತನರು, ಹಿರಿಯ ನಾಗರಿಕರು ಹಾಗೂ ಅಶಕ್ತ ಮತದಾರರು ಮತದಾನದಿಂದ ಹೊರಗುಳಿಯಬಾರದು ಎಂಬ ಕಾರಣಕ್ಕೆ ಅಶಕ್ತ ಮತದಾರರಿಗೆ ಆಯಾ ಚುನಾವಣಾ ಬೂತ್ ತಲುಪುವಂತೆ ವಾಹನ ವ್ಯವಸ್ಥೆ ಮಾಡಲಾಗುವುದು. ಮತದಾರರಿಗೆ ಆಯಾ ಬೂತ್‌ಗಳಲ್ಲಿ ವೀಲ್‌ಚೇರ್, ಭೂತಗನ್ನಡಿ ಗ್ಲಾಸ್‌ಗಳನ್ನು ನೀಡಲಾಗುತ್ತದೆ ಎಂದು ಉಡುಪಿ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಜಿಲ್ಲಾಮಟ್ಟದ ಸ್ವೀಪ್ ಸಮಿತಿ ಅಧ್ಯಕ್ಷೆ ಸಿಂಧೂ ಬಿ.ರೂಪೇಶ್ ಹೇಳಿದ್ದಾರೆ.

ಮಂಗಳವಾರ ಜಿಲ್ಲಾಡಳಿತ ಹಾಗೂ ಸ್ವೀಪ್ ಸಮಿತಿ ವತಿಯಿಂದ ಮಣಿಪಾಲ ದಲ್ಲಿರುವ ಉಡುಪಿ ಜಿಪಂನ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ನಡೆದ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರವುದಲ್ಲಿ ಅವರು ಮಾತನಾಡುತಿದ್ದರು.

ವಿಕಲ ಚೇತನ ಮತ್ತು ಅಶಕ್ತ ಮತದಾರಿಗೆ ಸ್ವೀಪ್ ಸಮಿತಿ ವತಿಯಿಂದ ನೀಡುತ್ತಿರುವ ಸೌಲ್ಯಗಳ ಬಗ್ಗೆ ತಿಳಿಸುವುದು ಹಾಗೂ ಇನ್ನು ಹೆಚ್ಚುವರಿ ಯಾವುದೇ ಸೌಲ್ಯ ಬೇಕಾದರೂ ಅವರಿಂದ ಮಾಹಿತಿ ಪಡೆದುಕೊಂಡು ಸ್ವೀಪ್ ಸಮಿತಿ ಗಮನಕ್ಕೆ ತರುವಂತೆ ತಿಳಿಸಿದರು.

ಚುನಾವಣಾ ಅವಧಿಯಲ್ಲಿ ಸಾಲು ಸಾಲು ರಜೆಗಳು ಇರುವ ಕಾರಣ ಮತದಾರರು ಮತದಾನಕ್ಕೆ ಬರದೇ ತಪ್ಪಿಸಿಕೊಳ್ಳುವ ಸಾಧ್ಯತೆಗಳಿದ್ದು, ಈ ಬಗ್ಗೆ ಗಮನ ಹರಿಸುವಂತೆ ಅವರು, ಆದರೆ ಯಾವುದೇ ಕಾರಣಕ್ಕೂ ಮತದಾನದ ಪ್ರಮಾಣ ಡಿಮೆಯಾಗಲು ಬಿಡಬಾರದು ಎಂದರು.

ಚುನಾವಣಾ ನೀತಿ ಸಂಹಿತೆ ಇರುವುದರಿಂದ ಯಾವುದೇ ಕಾರ್ಯಕ್ರಮ ಮಾಡುವಾಗ ಅತ್ಯಂತ ಜಾಗರೂಕರಾಗಿರುವಂತೆ ಸಲಹೆ ನೀಡಿದರು. ಸ್ವೀಪ್ ಸಮಿತಿ ವತಿಯಿಂದ ಕಾರ್ಯಕ್ರಮಗಳು ನಡೆಯುವಾಗ ರ್ಯಾಲಿ ಮಾಡ ಬಹುದು. ಆದರೆ ಅದು ಯಾವುದೇ ಪಕ್ಷದ ಪರವಾಗಿ ಪ್ರಚಾರ ಮಾಡುವಂತಿ ರಬಾರದು. ಮತ ಹಾಕುವಂತೆ ಪ್ರೇರೇಪಿಸುವುದು ಮಾತ್ರ ನಮ್ಮ ಕರ್ತವ್ಯ ವಾಗಿದೆ. ಯಾವ ವ್ಯಕ್ತಿಗೆ ಹಾಗೂ ಯಾವ ಪಕ್ಷಕ್ಕೆ ಮತ ಹಾಕಬೇಕು ಎನ್ನುವುದನ್ನು ಮತದಾರರ ವೈಯಕ್ತಿಕ ಅಭಿಪ್ರಾಯಕ್ಕೆ ಬಿಡಬೇಕು. ಉತ್ತಮ ಯೋಜನೆ ಹೊಂದಿರುವ ಕಾರ್ಯಕ್ರಮಗಳನ್ನು ಮಾಡಬೇಕಾಗಿದ್ದು, ಯಾವುದೇ ರಾಜಕೀಯ ತಿರುವು ಪಡೆದುಕೊಳ್ಳಬಾರದು ಎಂದರು.

ಮತದಾನದ ಜಾಗೃತಿ ಕುರಿತು ಮಾಡುವ ಕಾರ್ಯಕ್ರಮಗಳು ಪಾರದರ್ಶಕ ವಾಗಿರಬೇಕು. ಯಾವುದೇ ಕಾರ್ಯಕ್ರಮ ಮಾಡುವ ಮೊದಲು ಅದು ನೀತಿ ಸಂಹಿತೆಗೆ ಬದ್ಧವಾಗಿದೆಯೇ ಎಂಬುದನ್ನು ತಿಳಿದು ಕಾರ್ಯಕ್ರಮ ಆಯೋಜಿ ಸಬೇಕು. ಸಾಮಾಜಿಕ ಜಾಲತಾಣದಲ್ಲಿ ಯಾವುದೇ ರೀತಿಯ ರಾಜಕೀಯ ಪ್ರೇರಿತ ಸಂದೇಶಗಳನ್ನು ವರ್ಗಾಯಿಸದಂತೆ ಸೂಚನೆ ನೀಡಿದರು.

ವಿಆರ್‌ಡಬ್ಲ್ಯೂಗಳು ತಮ್ಮ ಗ್ರಾಪಂ ವ್ಯಾಪ್ತಿಯ ಅಂಗವಿಕಲರಿಗೆ ಇವಿಎಂ ಮತಯಂತ್ರದ ಬಗ್ಗೆ ಅಣುಕು ಮತದಾನ ಕಾರ್ಯಕ್ರಮ ನಡೆಸಿ ಪ್ರತಿಜ್ಞಾವಿಧಿ ಬೋಧಿಸಬೇಕು ಹಾಗೂ ಈ ಕಾರ್ಯಕ್ರಮ ನಡೆಸಿರುವ ಕುರಿತು ಮಾಹಿತಿ ಯನ್ನು ಸ್ವೀಪ್ ಸಮಿತಿಗೆ ನೀಡಬೇಕು ಎಂದು ತಿಳಿಸಿದರು. ಪ್ರತಿ ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಆಯಾ ವಿಆರ್‌ಡಬ್ಲ್ಯೂಗಳು ಮತದಾನದ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸುವುದು ಆದ್ಯತೆ ವಿಷಯ ಎಂದರು.

18 ವರ್ಷ ತುಂಬಿದ ಪ್ರತಿಯೊಬ್ಬರು ಮತದಾನ ಮಾಡುವ ಹಕ್ಕನ್ನು ಪಡೆದಿದ್ದಾರೆ. ತಾವು ಮತದಾನ ಮಾಡುವುದರೊಂದಿಗೆ ಇತರರೂ ಮತದಾನ ಮಾಡಲು ಪ್ರೇರೇಪಿಸಬೇಕು. ವಿಕಲಚೇತನರಿರುವ 80 ಗ್ರಾಪಂಗಳಲ್ಲಿ ಯಾವು ದೇ ಮತದಾರರು ಬಾಕಿ ಉಳಿಯಬಾರದು. ವಿಆರ್‌ಡಬ್ಲ್ಯೂಗಳಿಗೆ ತಮ್ಮ ವ್ಯಾಪ್ತಿ ಯ ವಿಕಲಚೇತನರ ಜವಾಬ್ದಾರಿಯೂ ಇದ್ದು, ಮತ ಚಲಾಯಿಸಲು ಇರುವ ವ್ಯವಸ್ಥೆಗಳ ಬಗ್ಗೆ ಅವರಿಗೆ ತಿಳಿಸಿ ಮತದಾನ ಮಾಡುವಂತೆ ಪ್ರೇರೇಪಿಸಬೇಕು ಎಂದರು.

ಪ್ರತಿಯೊಂದು ಗ್ರಾಪಂ ವ್ಯಾಪ್ತಿಯ ಎಷ್ಟು ಮಂದಿಗೆ ಮತದಾರರ ಚೀಟಿ ಸಿಕ್ಕಿದೆ. ಎಷ್ಟು ಮಂದಿಯ ಚೀಟಿ ಪರಿಶೀಲನೆ ಹಂತದಲ್ಲಿದೆ ಹಾಗೂ ಎಷ್ಟು ಮಂದಿ ಇನ್ನೂ ಹೆಸರು ಸೇರಿಸಲು ಬಾಕಿ ಇದೆ ಎಂಬುದರ ಕುರಿತು ಮಾಹಿತಿ ನೀಡುವಂತೆ ಸಿಂಧು ಬಿ.ರೂಪೇಶ್ ತಿಳಿಸಿದರು.

ಮತದಾನದ ದಿನದಂದು ಆಯಾ ಪ್ರದೇಶದ ವಿಆರ್‌ಡಬ್ಲ್ಯೂಗಳು ಯಾವುದೇ ಗೊಂದಲಕ್ಕೆ ಅನುವು ಮಾಡಿಕೊಡದೆ, ಹಿರಿಯ ನಾಗರಿಕರು ಹಾಗೂ ಅಶಕ್ತರನ್ನು ಸೇವಾ ಮನೋಭಾವದಿಂದ ಚುನಾವಣಾ ಬೂತ್‌ಗಳಿಗೆ ಕರೆದುಕೊಂಡು ಹೋಗುವ ಕೆಲಸ ಮಾಡಬೇಕು. ಮತದಾನದ ದಿನದಂದು ತಮ್ಮ ವ್ಯಾಪ್ತಿಯ ಬೂತ್‌ಗಳಲ್ಲಿ ಯಾವುದೇ ಹಿರಿಯ ನಾಗರಿಕರು, ಅತೀ ಹೆಚ್ಚು ಬಾರಿ ಮತದಾನ ಮಾಡಿದ ಹಿರಿಯರು, ಅಂಧರು ಅಥವಾ ಅಸೌಖ್ಯದಿಂದ ಇರುವವರು ಮತದಾನ ಮಾಡಲು ಬಂದರೆ, ಅವರ ಬಗ್ಗೆ ಮಾಹಿತಿ ಸಂಗ್ರಹಿಸಿ ಚಿತ್ರ ಅಥವಾ ವಿಡಿಯೋವನ್ನು ಸಮಿತಿಗೆ ಸಲ್ಲಿಸುವಂತೆ ಜಿಲ್ಲಾ ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ನಿರಂಜನ್ ತಿಳಿಸದರು.

ಕಾರ್ಯಕ್ರಮದಲ್ಲಿ ಉಡುಪಿ ಜಿಪಂನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೆರೆದವರಿಗೆ ಚುನಾವಣಾ ಪ್ರತಿಜ್ಞಾ ವಿಧಿ ಬೋಧಿಸಿದರು. ಸಭೆಯಲ್ಲಿ ಜಿಪಂ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್ ರಾವ್, ಪೌರಾಯುಕ್ತ ಆನಂದ ಕಲ್ಲೋಳಿಕರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News