ಉಡುಪಿ ಜಿಲ್ಲೆಯಲ್ಲಿ ಈ ಬಾರಿ 10 ಪಿಂಕ್ ಮತಗಟ್ಟೆಗಳು

Update: 2019-03-12 15:32 GMT

ಉಡುಪಿ, ಮಾ.12: ಜಿಲ್ಲೆಯಲ್ಲಿ ಈ ಬಾರಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ ಎರಡರಂತೆ ಒಟ್ಟು 10 ಮಹಿಳಾ ಮತಗಟ್ಟೆ (ಪಿಂಕ್ ಬೂತ್)ಗಳನ್ನು ತೆರೆಯಲಾಗುತ್ತದೆ. ಅದೇ ರೀತಿ ಶಂಕರನಾರಾಯಣದ ಸೌಡಾ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮತಗಟ್ಟೆ ‘ಬುಡಕಟ್ಟು ಮತಗಟ್ಟೆ’ ಯಾಗಿ ರುತ್ತದೆ ಎಂದು ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಉಡುಪಿ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷೆ ಸಿಂಧು ಬಿ.ರೂಪೇಶ್ ತಿಳಿಸಿದ್ದಾರೆ.

 ಜಿಲ್ಲೆಯಲ್ಲಿ ಈ ಬಾರಿ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶ ದಿಂದ ಜಿಲ್ಲಾ ಸ್ವೀಪ್ ಸಮಿತಿ ಈಗಾಗಲೇ ತನ್ನ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಜನರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ಮತ ಚಲಾಯಿಸುವ ಬಗ್ಗೆ ಅರಿವು ಮೂಡಿಸಲು ಎಲ್ಲಾ ಗ್ರಾಮಗಳಲ್ಲೂ ಇವಿಎಂ ಹಾಗೂ ವಿವಿಪ್ಯಾಟ್‌ಗಳ ಮೂಲಕ ಅಣಕು ಮತದಾನ ಪ್ರಕ್ರಿಯೆಯನ್ನು ನಡೆಸಲಾಗುತ್ತಿದೆ ಎಂದು ವಿವರಿಸಿದರು.

ಜಿಲ್ಲೆಯಲ್ಲಿರುವ ಒಟ್ಟು 1111 ಮತಗಟ್ಟೆಗಳಲ್ಲಿ ಈಗಾಗಲೇ 609 ಮತಗಟ್ಟೆಗಳಲ್ಲಿ ಇಂಥ ಅಣಕು ಮತದಾನವನ್ನು ನಡೆಸಿದ್ದು, ಈವರೆಗೆ 31,481 ಜನರು ಮತಗಳನ್ನು ಚಲಾಯಿಸಿ ಈ ಬಗ್ಗೆ ತಿಳಿದುಕೊಂಡಿದ್ದಾರೆ. ವಿವಿಧ ಸರಕಾರಿ ಇಲಾಖೆ, ಸಂಘಸಂಸ್ಥೆಗಳಲ್ಲಿ ಮತದಾನದ ಜಾಗೃತಿ, ಮತದಾನದ ಪ್ರತಿಜ್ಞೆಯನ್ನೂ ಸ್ವೀಕರಿಸಲಾಗುತ್ತಿದೆ ಎಂದವರು ಹೇಳಿದರು.

ಸ್ಥಳೀಯ ಜಾನಪದ ಕಲೆಗಳಾದ ಯಕ್ಷಗಾನ, ಬೀದಿ ನಾಟಕ, ಚಿತ್ರಕಲೆಗಳ ಮೂಲಕ ಮತದಾನದ ಮಹತ್ವದ ಕುರಿತು ಜನರಿಗೆ ಅರಿವು ಮೂಡಿಸಲಾಗು ತ್ತಿದೆ. ಯುವ ಮತದಾರರನ್ನು ವಿಶೇಷವಾಗಿ ಕೇಂದ್ರೀಕರಿಸಿ ಕೊಂಡು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮನೆಮನೆಗೆ ತೆರಳಿ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ. ಅದೇ ರೀತಿ ಸ್ವಸಹಾಯ ಸಂಘಗಳ ಸದಸ್ಯರು ಇದರಲ್ಲಿ ಸ್ವೀಪ್ ಸಮಿತಿಯೊಂದಿಗೆ ಕೈಜೋಡಿಸಿದ್ದಾರೆ ಎಂದವರು ಹೇಳಿದರು.

ಕಳೆದ ಮೂರು ಚುನಾವಣೆಗಳಲ್ಲಿ ಅತಿ ಕಡಿಮೆ ಮತದಾನವಾದ ಮತಗಟ್ಟೆಗಳನ್ನು ಗುರುತಿಸಿ ಅಲ್ಲಿನ ಜನರಿಗೆ ವಿಶೇಷ ಕಾರ್ಯಕ್ರಮಗಳ ಮೂಲಕ ಮತದಾನದ ಮಹತ್ವವನ್ನು ವಿವರಿಸಿ, ಈ ಬಾರಿ ಮತಗಟ್ಟೆಗಳಿಗೆ ಕರೆತರುವ ಪ್ರಯತ್ನ ನಡೆಸಲಾಗುತ್ತಿದೆ. ಜಿಲ್ಲೆಯ ಅಂಗವಿಕಲ ಮತದಾರರನ್ನು ಗುರುತಿಸಿ ಅವರೆಲ್ಲರನ್ನೂ ಮತಗಟ್ಟೆಗೆ ಕರೆತರಲು ವಾಹನ ಸಾರಿಗೆ ವ್ಯವಸ್ಥೆ, ವೀಲ್‌ಚೇರ್ ಹಾಗೂ ರ್ಯಾಂಪ್ ವ್ಯವಸ್ಥೆಗಳನ್ನು ಒದಗಿಸಲಾಗುತ್ತಿದೆ ಎಂದು ಸಿಂಧೂ ರೂಪೇಶ್ ತಿಳಿಸಿದರು.

ವೋಟರ್ ಸ್ಲಿಪ್ ದಾಖಲೆಯಲ್ಲ: ಮತದಾನಕ್ಕೆ ಮುನ್ನ ಪ್ರತಿ ಮನೆ ಮನೆಗೆ ತಲುಪಿಸಲಾಗುವ ‘ಪೋಟೊ ವೋಟರ್ ಸ್ಲಿಪ್’ ಈ ಬಾರಿ ಮತದಾನಕ್ಕೆ ಅವಕಾಶ ನೀಡುವ ಗುರುತಿನ ಚೀಟಿಯಾಗಿ ಪರಿಗಣಿಸಲ್ಪಡುವುದಿಲ್ಲ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸ್ಪಷ್ಟಪಡಿಸಿದ್ದಾರೆ. ಚುನಾವಣಾ ಆಯೋಗ ಈ ವಿಷಯವನ್ನು ತಿಳಿಸಿದೆ ಎಂದವರು ಹೇಳಿದರು.

ಮತಪಟ್ಟಿಯಲ್ಲಿ ಹೆಸರು ಇರುವ ಮತದಾರರು ಮತದಾನದ ವೇಳೆ ಪೋಟೊ ಇರುವ ವೋಟರ್ ಐಡಿ (ಎಪಿಕ್ ಕಾರ್ಡ್) ಅಥವಾ ಚುನಾವಣಾ ಆಯೋಗ ನಿಗದಿ ಪಡಿಸಿದ ಇತರ 11 ಗುರುತಿನ ದಾಖಲೆಗಳಲ್ಲಿ ಒಂದನ್ನು ತೋರಿಸಬೇಕಾಗುತ್ತದೆ ಎಂದರು.

ಈವರೆಗೂ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೊಂದಾಯಿಸಿಕೊಳ್ಳ ದವರಿಗಾಗಿ ಇನ್ನೂ ಅರ್ಜಿ ನಮೂನೆ 6ನ್ನು ಸಲ್ಲಿಸಿ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಳ್ಳಲು ಅವಕಾಶವಿದೆ. ಅವರಿಗೆ ಎಪಿಕ್ ಕಾರ್ಡ್‌ನ್ನು ಸಹ ನೀಡಲಾಗುತ್ತದೆ. ನಾಮಪತ್ರ ಸಲ್ಲಿಸುವ ಕೊನೆಯ ದಿನದವರೆಗೂ ಈ ಅವಕಾಶ ಇದ್ದು, ಇದನ್ನು ಬಳಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮಾಹಿತಿ ನೀಡಿ:  ಪೊಲೀಸ್ ಇಲಾಖೆಯಿಂದ ಚುನಾವಣೆ ಶಾಂತಿಯುತ ವಾಗಿ ನಡೆಯಲು ಎಲ್ಲಾ ವ್ಯವಸ್ಥೆ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಮಾಧ್ಯಮಗಳ ಜವಾಬ್ದಾರಿ ಹೆಚ್ಚಿದ್ದು, ಅವುಗಳ ಸಹಕಾರವೂ ನಮಗೆ ಬೇಕಾಗುತ್ತದೆ. ಎಲ್ಲೆ ಆದರೂ ಅಕ್ರಮ ಚಟುವಟಿಕೆಗಳು ಕಂಡುಬಂದರೆ ಅದನ್ನು ಮಾಧ್ಯಮಗಳಲ್ಲಿ ಪ್ರಕಟಿಸುವ ಜೊತೆಜೊತೆಗೆ ನಮಗೂ ಮಾಹಿತಿ ನೀಡಿದರೆ ತಕ್ಷಣ ಕಾರ್ಯಪ್ರವೃತ್ತರಾಗಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ತಿಳಿಸಿದರು.

ಪ್ರಚಾರ ಭಾಷಣದ ವೇಳೆ ಪ್ರಚೋದನಕಾರಿ ಭಾಷಣಗಳನ್ನು ಪ್ರಸಾರ ಮಾಡುವ ವೇಳೆ ಸ್ವಲ್ಪ ಎಚ್ಚರಿಕೆ, ಸಂಯಮ ವಹಿಸಬೇಕು. ಯಾವುದೇ ವಿಷಯಗಳನ್ನು ವರದಿ ಮಾಡುವ ಮುನ್ನ ಅದರ ಸಾಚಾತನವನ್ನು ಖಚಿತ ಪಡಿಸಿಕೊಳ್ಳಿ ಎಂದವರು ಮನವಿ ಮಾಡಿದರು.

ಜಿಲ್ಲೆಯ ನಕ್ಸಲ್ ಬಾಧಿತ ಪ್ರದೇಶಗಳಲ್ಲಿ ಚುನಾವಣೆ ಘೋಷಣೆಗೆ ಮೊದಲೇ ಶೋಧ ಕಾರ್ಯಾಚರಣೆ ನಡೆಯುತಿದ್ದು, ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ಸಶಸ್ತ್ರ ಭದ್ರತಾ ಸಿಬ್ಬಂದಿಗಳಿಂದ ತಪಾಸಣೆ ಕಾರ್ಯ ನಡೆಯುತ್ತಿದೆ. ಭದ್ರತೆ ವಿಷಯಗಳ ಕುರಿತಂತೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ನಿಶಾ ಜೇಮ್ಸ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News