ಲೋಕಸಭಾ ಚುನಾವಣೆ: ಹೊಸದಿಲ್ಲಿ ಕ್ಷೇತ್ರದಿಂದ ಗೌತಮ್ ಗಂಭೀರ್ ಸ್ಪರ್ಧೆ ಸಾಧ್ಯತೆ
ಹೊಸದಿಲ್ಲಿ, ಮಾ.12: ಎಪ್ರಿಲ್-ಮೇ ತಿಂಗಳಲ್ಲಿ ದೇಶದಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್ ಹೊಸದಿಲ್ಲಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿರುವುದಾಗಿ ಎನ್ ಡಿಟಿವಿ ವರದಿ ಮಾಡಿದೆ.
ಈಗ ಹೊಸದಿಲ್ಲಿ ಕ್ಷೇತ್ರದಲ್ಲಿ ಬಿಜೆಪಿಯ ಮೀನಾಕ್ಷಿ ಲೇಖಿ ಸಂಸದೆಯಾಗಿದ್ದಾರೆ. ಒಂದು ವೇಳೆ ಗಂಭೀರ್ ಇದೇ ಕ್ಷೇತ್ರದಿಂದ ಸ್ಪರ್ಧಿಸಿದರೆ ಮೀನಾಕ್ಷಿ ಲೇಖಿಯವರಿಗೆ ರಾಜಧಾನಿಯ ಬೇರೆ ಕ್ಷೇತ್ರದಲ್ಲಿ ಅವಕಾಶ ನೀಡಲಾಗುವುದು. ಇತ್ತೀಚೆಗಷ್ಟೇ ಗಂಭೀರ್ ಪದ್ಮ ಶ್ರೀ ಪ್ರಶಸ್ತಿ ಸ್ವೀಕರಿಸಿದ್ದರು.
2014ರಲ್ಲಿ ಪಂಜಾಬ್ ನ ಅಮೃತಸರದಿಂದ ಸ್ಪರ್ಧಿಸಿದ್ದ ಅರುಣ್ ಜೇಟ್ಲಿ ಪರ ಸ್ಟಾರ್ ಪ್ರಚಾರಕರಾಗಿ ಗೌತಮ್ ಗಂಭೀರ್ ಭಾಗವಹಿಸಿದ್ದರು. ಆದರೆ ಅಮರಿಂದರ್ ಸಿಂಗ್ ವಿರುದ್ಧದ ಸ್ಪರ್ಧೆಯಲ್ಲಿ ಜೇಟ್ಲಿ ಸೋಲನುಭವಿಸಿದ್ದರು. ಅಮರಿಂದರ್ ಸಿಂಗ್ ಈಗ ಪಂಜಾಬ್ ಮುಖ್ಯಮಂತ್ರಿಯಾಗಿದ್ದಾರೆ.
ಈ ಹಿಂದಿನಿಂದಲೂ ಗಂಭೀರ್ ರಾಜಕೀಯ ಸೇರ್ಪಡೆಯ ಬಗ್ಗೆ ವದಂತಿಗಳು ಕೇಳಿ ಬರುತ್ತಿವೆಯಾದರು ಅವರು ಈ ಬಗ್ಗೆ ಮೌನವಾಗಿದ್ದಾರೆ.