×
Ad

ಚುನಾವಣೆ ಸಂದರ್ಭ ಠಾಣೆಯಲ್ಲಿ ಬಂದೂಕು ಠೇವಣಿ: ರೈತರಿಗೆ ರಿಯಾಯಿತಿ ನೀಡಲು ಡಿಸಿಗೆ ಭಾಕಿಸಂ ಮನವಿ

Update: 2019-03-12 21:27 IST

ಉಡುಪಿ, ಮಾ.12: ಚುನಾವಣೆ ಸಂದರ್ಭದಲ್ಲಿ ರೈತರು ಪರವಾನಿಗೆ ಪಡೆದು ಹೊಂದಿರುವ ಬಂದೂಕನ್ನು ಪೋಲೀಸ್ ಠಾಣೆಯಲ್ಲಿ ಠೇವಣಿ ಇರಿಸಲು ಜಿಲ್ಲಾಡಳಿತ ಆದೇಶಿಸಿದೆ. ಅದರಂತೆ ಪೊಲೀಸ್ ಠಾಣೆಯಿಂದ ರೈತರಿಗೆ ಬಂದೂಕನ್ನು ಠೇವಣಿ ಇಡುವಂತೆ ಸೂಚಿಸಲಾಗಿದೆ.

ಚುನಾವಣೆಗೆ ಒಂದೂವರೆ ತಿಂಗಳು ಮೊದಲೇ ಬಂದೂಕನ್ನು ಸರಂಡರ್ ಮಾಡಿಸಿಕೊಳ್ಳಲಾಗುತಿದ್ದು, ಫಲಿತಾಂಶ ಘೋಷಣೆಯ 15 ದಿನಗಳ ನಂತರ ವಾಪಾಸು ಪಡೆಯುವಂತೆ ತಿಳಿಸಲಾಗಿದೆ. ಆ ಕಾರಣಕ್ಕೆ ರೈತರು ತಮ್ಮ ಬಂದೂಕನ್ನು 3 ರಿಂದ 4 ತಿಂಗಳ ಕಾಲ ಪೋಲೀಸ್ ಠಾಣೆಯಲ್ಲಿಡಬೇಕಾಗಿದೆ ಎಂದು ಭಾರತೀಯ ಕಿಸಾನ್ ಸಂಘದ ಉಡುಪಿ ಜಿಲ್ಲಾ ಘಟಕ ತಿಳಿಸಿದೆ.

ಇದರಿಂದ ರೈತರ ಬೆಳೆದು ನಿಂತ ಫಸಲನ್ನು ಕಾಡುಪ್ರಾಣಿಗಳಿಂದ ಉಳಿಸಿ ಕೊಳ್ಳುವುದು ಕಷ್ಟವಾಗುತ್ತದೆ. ಇದಕ್ಕೆ ರಿಯಾಯಿತಿ ನೀಡುವಂತೆ ಉಡುಪಿ ಜಿಲ್ಲಾ ಭಾರತೀಯ ಕಿಸಾನ್ ಸಂಘ ಈಗಾಗಲೇ ಜಿಲ್ಲಾಧಿಕಾರಿಗೆ ಮನವಿ ಮಾಡಿದೆ. ಸೋಮವಾರ ಸಂಘದ ನಿಯೋಗ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ಈ ಬಗ್ಗೆ ಎಸ್ಪಿ ಅವರ ಅಭಿಪ್ರಾಯ ಪಡೆದು ಕೂಡಲೇ ಸೂಕ್ತ ಆದೇಶ ಹೊರಡಿಸುವುದಾಗಿ ನಿಯೋಗಕ್ಕೆ ಭರವಸೆ ನೀಡಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

ಜಿಲ್ಲೆಯಲ್ಲಿ ರೈತರಿಗೆ ಕಾಡುಪ್ರಾಣಿಗಳ ಉಪಟಳ ಹೆಚ್ಚಾಗಿದ್ದು, ಮಂಗ, ಹಂದಿ, ಜಿಂಕೆ, ಕಾಡುಕೋಣ ಮೊದಲಾದ ಪ್ರಾಣಿಗಳ ಉಪಟಳದಿಂದ ರೈತ ಬೆಳೆದ ಎಲ್ಲಾ ಬೆಳೆಗಳಲ್ಲಿ, ವಾರ್ಷಿಕ ಶೇ.40ರಷ್ಟು ನಷ್ಟವಾಗುತ್ತಿದೆ. ಅದರಲ್ಲೂ ಮಂಗವೊಂದರಿಂದಲೇ ಒಟ್ಟು ನಷ್ಟದ ಪೈಕಿ ಅರ್ಧದಷ್ಟು ಹಾಳಾಗುತ್ತಿದೆ. ಬಂದೂಕು ಗಳಿಂದ ಈ ಪ್ರಾಣಿಗಳನ್ನು ಹೆದರಿಸಿ, ಓಡಿಸಲು ಅನುಕೂಲ ವಾಗುತ್ತಿದೆ. ಚುನಾವಣೆ ಸಂದರ್ಭದ ಮೂರು-ನಾಲ್ಕು ತಿಂಗಳು ಬಂದೂಕು ಗಳಿಲ್ಲದೇ, ಇವುಗಳನ್ನು ಓಡಿಸುುದು ರೈತರಿಗೆ ಕಷ್ಟವಾಗುತ್ತದೆ.

ಅತೀ ಹೆಚ್ಚು ತೋಟಗಾರಿಕಾ ಬೆಳೆಗಳನ್ನು ಬೆಳೆಯುವ ಈ ಜಿಲ್ಲೆಯಲ್ಲಿ, ರೈತರು ತಮ್ಮ ಪ್ರಮುಖ ಬೆಳೆಗಳಾದ ತೆಂಗು, ಅಡಿಕೆ, ಮಾವು, ಹಲಸು, ಬಾಳೆ, ಮೊದಲಾದವುಗಳ ಫಸಲುಗಳನ್ನು ಕಾಡುಪ್ರಾಣಿಗಳಿಂದ ರಕ್ಷಿಸಿಕೊಳ್ಳಲಾಗದೇ ಪರದಾಡುವಂತಾಗಿದೆ. ಮಾರ್ಚ್‌ನಿಂದ ಮೇವರೆಗೆ ಈ ಎಲ್ಲಾ ಬೆಳೆಗಳು ಫಸಲು ಬಿಡುವ ಕಾಲವಾಗಿದ್ದು, ಪ್ರಾಣಿಗಳ ಉಪಟಳ ಇದೇ ಸಂದರ್ಭದಲ್ಲಿ ಹೆಚ್ಚಾಗಿರುತ್ತದೆ. ಪ್ರತೀ ವರ್ಷ ಬರುವ ಬೇರೆ ಬೇರೆ ಚುನಾವಣೆ ಸಂದರ್ಭದಲ್ಲಿ ರೈತರು ತಮ್ಮ ಬಂದೂಕನ್ನು ಠಾಣೆಗಳಲ್ಲಿ ಠೇವಣಿ ಇಡುವುದರಿಂದ ಪ್ರತೀ ವರ್ಷವೂ ಕಾಡುಪ್ರಾಣಿಗಳ ಉಪಟಳದಿಂದ ಫಸಲನ್ನು ಕಳೆದುಕೊಂಡು ನಷ್ಟ ಅನುಭವಿಸುವುದು ರೈತರ ಪಾಲಿನ ದುರಂತವಾಗಿದೆ ಎಂದು ಸಂಘ ಹೇಳಿಕೆಯಲ್ಲಿ ತಿಳಿಸಿದೆ.

ಸಂಘದ ನಿಯೋಗದಲ್ಲಿ ಜಿಲ್ಲಾ ಉಪಾದ್ಯಕ್ಷ ರಾಮಚಂದ್ರ ಅಲ್ಸೆ, ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ, ಪದಾಧಿಕಾರಿಗಳಾದ ವಿಶ್ವನಾಥ ಶೆಟ್ಟಿ, ಸೀತಾರಾಮ ಗಾಣಿಗ, ಆಸ್ತೀಕ ಶಾಸ್ತ್ರಿ ಹಾಗೂ ಪ್ರಾಣೇಶ್ ಯಡಿಯಾಳ ಉಪಸ್ಥಿತರಿದ್ದು ಎಂದು ಸಂಘದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News