ಧೈರ್ಯ, ಆತ್ಮವಿಶ್ವಾಸವೇ ಮಹಿಳೆಗೆ ರಕ್ಷಣೆ: ಶೀಲಾ ಕೆ. ಶೆಟ್ಟಿ

Update: 2019-03-12 15:59 GMT

ಬ್ರಹ್ಮಾವರ, ಮಾ.12: ಭಾರತೀಯ ಸಂಸ್ಕೃತಿ, ನಮ್ಮ ಬದುಕು, ಧೈರ್ಯ ಮತ್ತು ಆತ್ಮವಿಶ್ವಾಸ ಭಾರತೀಯ ಮಹಿಳೆಯರಿಗೆ ರಕ್ಷಣೆಯಾಗಿದೆ ಎಂದು ಉಡುಪಿ ಜಿಪಂನ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ ಹೇಳಿದ್ದಾರೆ.

ಬ್ರಹ್ಮಾವರದ ಬಂಟರ ಭವನದಲ್ಲಿ ರವಿವಾರ ಭಾರತೀಯ ದಂತ ವೈದ್ಯಕೀಯ ಸಂಘದ ಉಡುಪಿ ಜಿಲ್ಲಾ ಶಾಖೆಯ ಮಹಿಳಾ ಘಟಕದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳೆಯ ರಿಗೆ ನಡೆದ ಸ್ವರಕ್ಷಣೆ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಮಹಿಳೆ, ಪುರುಷನಿಂದ ರಕ್ಷಿಸಲ್ಪಡುತ್ತಿದ್ದ ಕಾಲವೊಂದಿತ್ತು. ಆದರೆ ಬದಲಾದ ಸಮಾಜದಲ್ಲಿ ಮಹಿಳೆ ತನ್ನ ರಕ್ಷಣೆಯನ್ನು ತಾನೇ ಮಾಡಿಕೊಳ್ಳುವ ಪರಿಸ್ಥಿತಿ ನಮ್ಮ ಮುಂದೆ ಇದೆ. ಅದಕ್ಕಾಗಿ ಇಂತಹ ಜಾಗೃತಿ ಕಾರ್ಯಕ್ರಮಗಳು ಅತೀ ಅವಶ್ಯಕ ಎಂದರು.

ಇದಕ್ಕೂ ಮುನ್ನ ಮಾತನಾಡಿದ ಬ್ರಹ್ಮಾವರದ ವೃತ್ತ ನಿರೀಕ್ಷಕ ಕೆ.ಸಿ. ಪೂವಯ್ಯ, ಮೊಬೈಲ್ ದುರ್ಬಳಕೆ, ಸಂಚಾರ ನಿಯಮಗಳ ಬಗ್ಗೆ ಯುವ ಜನಾಂಗ ಅದರಲ್ಲೂ ಮಹಿಳೆಯರು ಯಾವ ರೀತಿ ಎಚ್ಚರಿಕೆ ವಹಿಸಬೇಕು ಎನ್ನುುದರ ಬಗ್ಗೆ ಗಮನ ಸೆಳೆದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಶೋಭಲತಾ ಮತ್ತು ಕಾರ್ತಿಕ್ ಕಟೀಲ್ ಸ್ವಯಂ ಆತ್ಮರಕ್ಷಣೆ ಹಾಗೂ ಜಾಗೃತಿ ತಿಳುವಳಿಕೆಯ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದರು. ಭಾರತೀಯ ದಂತ ಅಸೋಸಿಯೇಶನ್‌ನ ಜಿಲ್ಲಾ ಘಟಕದ ಅಧ್ಯಕ್ಷೆ ಡಾ.ದೀಪಾ ಡಿಲಿಮಾ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಕೆಥೋಲಿಕ್ ಮಹಿಳಾ ಸಂಘಟನೆಯ ಅಧ್ಯಕ್ಷೆ ಜಾನೆಟ್ ಬರ್ಜೋಜಾ, ಸಂಘದ ಕಾರ್ಯದರ್ಶಿ ಡಾ.ಸೈಯದ್ ಮಹಮ್ಮದ್ ಫಯಾಜ್, ಕೋಶಾಧಿ ಕಾರಿ ಡಾ.ಸುಧೀರ್ ಎನ್.ರಾವ್, ಪೇತ್ರಿಯ ಡಾ.ಜಾಸ್ಮಿನ್, ಡಾ.ಸಹನಾ ಕಾಮತ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಾಮಾಜಿಕ ಜಾಗೃತಿ ಮತ್ತು ಸ್ವಚ್ಛತಾ ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲೆಯ 5 ತಾಲೂಕಿನ ಒಂದೊಂದು ಗ್ರಾಮೀಣ ಪ್ರದೇಶವನ್ನು ಆಯ್ದುಕೊಂಡು ಸ್ವಚ್ಛ್ ಮುಖ್ ಅಭಿಯಾನ್ ಹಾಗೂ ಮಹಿಳೆಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್‌ಗಳನ್ನು ನೀಡುವ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು.

ಭಾರತೀಯ ದಂತ ವೈದ್ಯ ಅಸೋಸಿಯೇಶನ್‌ನ ಜಿಲ್ಲಾಧ್ಯಕ್ಷ ಡಾ.ಮನೋಜ್ ಮಾಕ್ಸಿಮಾ ಡಿಲಿಮಾ ಪ್ರಾಸ್ತಾವಿಕವಾಗಿ ಮಾತನಾಡಿದರು.ಡಾ.ದೀಪ ಡಿಲಿಮಾ ಸ್ವಾಗತಿಸಿದರು. ಘಟಕದ ಘಟಕದ ಡಾ.ಸರಿತಾ ಉಪಾಧ್ಯಾಯ ಸಾಲಿಗ್ರಾಮ ಮತ್ತು ಉಡುಪಿಯ ಡಾ.ಫೌಜಿಯಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News