ಲೋಕಸಭಾ ಚುನಾವಣೆ: ಟಿಎಂಸಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಶೇ.41ರಷ್ಟು ಮಹಿಳೆಯರು

Update: 2019-03-12 16:35 GMT

ಕೋಲ್ಕತಾ,ಮಾ.12: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯದ ಎಲ್ಲ 42 ಲೋಕಸಭಾ ಕ್ಷೇತ್ರಗಳಿಗೆ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಮಂಗಳವಾರ ಪ್ರಕಟಿಸಿದ್ದು, ಪಟ್ಟಿಯಲ್ಲಿ ಶೇ.41ರಷ್ಟು ಮಹಿಳಾ ಅಭ್ಯರ್ಥಿಗಳಿದ್ದಾರೆ. 42 ಕೇತ್ರಗಳ ಪೈಕಿ 19 ಕ್ಷೇತ್ರಗಳಲ್ಲಿ ಹಾಲಿ ಸಂಸದರನ್ನು ಬದಲಿಸಲಾಗಿದೆ.

2014ರ ಚುನಾವಣೆಗಳಲ್ಲಿ ಟಿಎಂಸಿ ಶೇ.35ರಷ್ಟು ಮಹಿಳೆಯರಿಗೆ ಟಿಕೆಟ್‌ಗಳನ್ನು ನೀಡಿತ್ತು.

ಪ್ರತಿಯೊಬ್ಬರೂ ಮಹಿಳೆಯರಿಗೆ ಶೇ.33 ಮೀಸಲಾತಿಯ ಬಗ್ಗೆ ಮಾತನಾಡುತ್ತಿದ್ದಾರೆ,ನಾವು ಶೇ.41ರಷ್ಟು ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದ್ದೇವೆ ಎಂದು ಬ್ಯಾನರ್ಜಿ ಹೇಳಿದರು.

ಮಾಜಿ ನಟಿ ಹಾಗೂ ಸಂಸದೆ ಮೂನ್‌ಮೂನ್ ಸೇನ್ ಅವರು ಕ್ಷೇತ್ರ ಬದಲಾವಣೆಯನ್ನು ಕಂಡ ಏಕೈಕ ಅಭ್ಯರ್ಥಿಯಾಗಿದ್ದಾರೆ. ಅವರನ್ನು ಬಂಕುರಾ ಲೋಕಸಭಾ ಕ್ಷೇತ್ರದಿಂದ ಪ್ರತಿಷ್ಠಿತ ಅಸನಸೋಲ್ ಕ್ಷೇತ್ರಕ್ಕೆ ಸ್ಥಳಾಂತರಿಸಲಾಗಿದೆ. ಈ ಕೇತ್ರದಿಂದ ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿರೀಕ್ಷೆಯಿದೆ.

ಅಭ್ಯರ್ಥಿಗಳ ಪಟ್ಟಿಯಿಂದ ಕೈಬಿಡಲಾಗಿರುವ ಅಥವಾ ತಮ್ಮನ್ನು ಕೈಬಿಡುವಂತೆ ಬ್ಯಾನರ್ಜಿಯವರನ್ನು ಕೋರಿದ್ದ ಹಿರಿಯ ತೃಣಮೂಲ ಕಾಂಗ್ರೆಸ್ ನಾಯಕರಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಸುಬ್ರತಾ ಬಕ್ಷಿ ಅವರೂ ಸೇರಿದ್ದಾರೆ.

ಹಾಲಿ ಸಂಸದರಾದ ಇತಿಹಾಸ ತಜ್ಞ ಹಾಗೂ ನೇತಾಜಿ ಸುಭಾಷ್ಚಂದ್ರ ಬೋಸ್ ಅವರ ಮೊಮ್ಮಗ ಸುಗತೊ ಬಸು ಮತ್ತು ಇದ್ರಿಸ್ ಅಲಿ ಅವರ ಹೆಸರುಗಳೂ ಪಟ್ಟಿಯಲ್ಲಿಲ್ಲ. ಅಲಿ ಪ್ರತಿನಿಧಿಸುತ್ತಿದ್ದ ಬಶೀರಹಾಟ್ ಕ್ಷೇತ್ರದಲ್ಲಿ ಮುಸ್ಲಿಂ ಬಾಹುಳ್ಯವಿದ್ದು,ಇಲ್ಲಿ ಖ್ಯಾತ ನಟಿ ನುಶ್ರತ್ ಜಹಾನ್ ಅವರನ್ನು ಕಣಕ್ಕಿಳಿಸಲಾಗಿದೆ. ಚಿತ್ರರಂಗಕ್ಕೆ ಸೇರಿದ ಇತರ ನಾಲ್ವರೂ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News