‘ಸಿಎಸ್‌ಆರ್ ನಿಧಿಯಿಂದ 114 ಸೇವಾಯೋಜನೆಗೆ ಆರ್ಥಿಕ ನೆರವು’

Update: 2019-03-12 16:50 GMT

ಮಂಗಳೂರು, ಮಾ.12: ಕಾರ್ಪೊರೇಷನ್ ಬ್ಯಾಂಕ್‌ನ 114ನೇ ಸಂಸ್ಥಾಪನಾ ದಿನದ ಅಂಗವಾಗಿ ಬ್ಯಾಂಕ್‌ನ ಸಿಎಸ್‌ಆರ್ ನಿಧಿಯಿಂದ ದೇಶಾದ್ಯಂತ 114 ಸೇವಾ ಯೋಜನೆಗಳಿಗೆ ಆರ್ಥಿಕ ನೆರವು ನೀಡಲಾಗಿದೆ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕಿ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ.ವಿ.ಭಾರತಿ ತಿಳಿಸಿದ್ದಾರೆ.

ನಗರದ ಟಿಎಂಎ ಪೈ ಇಂಟರ್‌ನ್ಯಾಶನಲ್ ಕನ್ವೆನ್ಶನ್ ಸೆಂಟರ್‌ನಲ್ಲಿ ಮಂಗಳವಾರ ಹಮ್ಮಿಕೊಂಡ ಕಾರ್ಪೊರೇಷನ್ ಬ್ಯಾಂಕ್‌ನ 114ನೇ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ವರು ಮಾತನಾಡುತ್ತಿದ್ದರು.

113 ವರ್ಷ ಗಳ ಹಿಂದೆ ಉಡುಪಿ ಎಂಬ ಸಣ್ಣ ಪಟ್ಟಣದಲ್ಲಿ ಖಾನ್ ಬಹದ್ದೂರ್ ಹಾಜಿ ಅಬುಲ್ಲಾ ಹಾಜಿ ಖಾಸಿಂ ಸಾಹೇಬ್ ಬಹದ್ದೂರ್ ಅವರು 38 ರೂ. 13 ಆಣೆ ಎರಡು ಪೈಸೆ ಮೂಲ ಬಂಡವಾಳದ ಮೂಲಕ 1906ರಲ್ಲಿ ಆರಂಭಗೊಂಡ ಬ್ಯಾಂಕ್ ಶೀಘ್ರದಲ್ಲಿ ಮೂರು ಲಕ್ಷ ಕೋಟಿ ರೂ. ಆರ್ಥಿಕ ವ್ಯವಹಾರದ ಗುರಿಯನ್ನು ತಲುಪಲಿದೆ. ಬ್ಯಾಂಕ್ ಈ ಉನ್ನತ ಗುರಿ ಸಾಧಿಸಲು ಗ್ರಾಹಕರ ಬೆಂಬಲದಿಂದ ಸಾಧ್ಯವಾಗಿದೆ ಎಂದು ಭಾರತಿ ತಿಳಿಸಿದ್ದಾರೆ.

ಬ್ಯಾಂಕ್‌ನಿಂದ ಗ್ರಾಹಕ ಸ್ನೇಹಿಯಾದ ಹಲವು ಉತ್ಪನ್ನಗಳನ್ನು ನೀಡಿದೆ. ಇಂಟರ್‌ನೆಟ್ ಬ್ಯಾಂಕ್, ಮೊಬೈಲ್ ಆ್ಯಪ್ ಮೂಲಕ ಬ್ಯಾಂಕ್ ವ್ಯವಹಾರದ ಸೌಲಭ್ಯಗಳನ್ನು ನೀಡಿದೆ. ಬ್ಯಾಂಕ್‌ನ ಧ್ಯೇಯವಾಕ್ಯವಾದ ‘ಸರ್ವೆ ಜನಾ ಸುಖಿನಃ ಭವಂತುಃ’ ಎಂಬಂತೆ ಎಲ್ಲರ ಅಭಿವೃದ್ಧಿ ಬ್ಯಾಂಕ್‌ನ ಗುರಿಯಾಗಿದೆ. ಕಾರ್ಪೊರೇಷನ್ ಬ್ಯಾಂಕ್ ಈ ಗುರಿಯಿಂದ ವಿಚಲಿತವಾಗಿಲ್ಲ ಎಂದು ತಿಳಿಸಿದ್ದಾರೆ.

ಸಮಾರಂಭದಲ್ಲಿ ಕಾರ್ಯ ನಿರ್ವಾಹಕ ನಿರ್ದೇಶಕ ಬಿರುಪಾಕ್ಷ ಮಿಶ್ರಾ, ಕಾರ್ಯ ನಿರ್ವಾಹಕ ನಿರ್ದೇಶಕ ಗೋಪಾಲ ಮುರಲಿ ಭಗತ್ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂಗವಾಗಿ ಖ್ಯಾತ ಗಾಯಕ ಅಜಯ್ ವಾರಿಯರ್ ಅವರಿಂದ ‘ಸಂಗೀತ ಸಂಜೆ’ ಕಾರ್ಯಕ್ರಮ ಆಯೋಜಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News