ಐಎಎಫ್ ಯುದ್ಧವಿಮಾನಗಳ ಸುರಕ್ಷತೆಗಾಗಿ ಕಾಂಕ್ರೀಟ್ ತಂಗುದಾಣಗಳ ಸ್ಥಾಪನೆ
Update: 2019-03-12 22:33 IST
ಹೊಸದಿಲ್ಲಿ,ಮಾ.12: ಭಾರತೀಯ ವಾಯುಪಡೆಯ ಯುದ್ಧವಿಮಾನಗಳು ಶತ್ರುರಾಷ್ಟ್ರಗಳ ಬಾಂಬ್ ಮತ್ತು ಕ್ಷಿಪಣಿ ದಾಳಿಯಲ್ಲಿ ಹಾನಿಗೀಡಾಗದೆ ಸುರಕ್ಷಿತವಾಗಿಡುವ ಉದ್ದೇಶದಿಂದ ಚೀನಾ ಮತ್ತು ಪಾಕಿಸ್ತಾನಕ್ಕೆ ತಾಗಿಕೊಂಡಿರುವ ಗಡಿಭಾಗಗಳಲ್ಲಿ 110 ಸದೃಢ ಕಾಂಕ್ರೀಟ್ ತಂಗುದಾಣಗಳನ್ನು ನಿರ್ಮಿಸಲು ಸರಕಾರ ನಿರ್ಧರಿಸಿದೆ. ಬ್ಲಾಸ್ಟ್ ಪೆನ್‌ಗಳೆಂದು ಕರೆಯಲಾಗುವ ಈ ಕಾಂಕ್ರೀಟ್ ತಂಗುದಾಣಗಳನ್ನು ನಿರ್ಮಿಸಲು 5,000 ಕೋಟಿ ರೂ. ವೆಚ್ಚವಾಗಲಿದ್ದು ಇವುಗಳನ್ನು ಹಂತಹಂತವಾಗಿ ನಿರ್ಮಿಸಲಾಗುವುದು ಎಂದು ಸರಕಾರ ತಿಳಿಸಿದೆ.
ಇಂಥ ಸೌಲಭ್ಯಗಳ ಕೊರತೆಯಿಂದಾಗಿ ಐಎಎಫ್ ಪಾಕಿಸ್ತಾನದ ವಿರುದ್ಧದ ಕಾರ್ಯಾಚರಣೆಯ ಸಂದರ್ಭದಲ್ಲಿ ತನ್ನ ಯುದ್ಧವಿಮಾನಗಳನ್ನು ದೂರದ ಪ್ರದೇಶದಲ್ಲಿಡಬೇಕಾಗುತ್ತದೆ. 1965ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಯುದ್ಧದ ಸಂದರ್ಭದಲ್ಲಿ ಯುದ್ಧವಿಮಾನಗಳನ್ನು ತೆರೆದ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ಕಾರಣ ಅನೇಕ ಯುದ್ಧವಿಮಾನಗಳನ್ನು ಐಎಎಫ್ ಕಳೆದುಕೊಂಡಿತ್ತು ಎಂದು ಸರಕಾರದ ಮೂಲಗಳು ತಿಳಿಸಿವೆ.